ಗ್ರಾಮೀಣ ಅಂಚೆ ನೌಕರರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ವಿವಿಧ ಭಾಗದ ಅಂಚೆ ನೌಕರರು ಪುತ್ತೂರಿನ ಪ್ರಧಾನ ಅಂಚೆ ಕಚೇರಿಯ ಎದುರು ಅನಿರ್ಧಿಷ್ಟಾವಧಿ ಪ್ರತಿಭಟನೆ ನಡೆಸಿದ್ದಾರೆ

ಪುತ್ತೂರು : ಕೇಂದ್ರ ಸರ್ಕಾರ ಮತ್ತು ಇಲಾಖೆ ಗ್ರಾಮೀಣ ಅಂಚೆ ನೌಕರರಿಗೆ ಪಿಂಚಣಿ,ವೈದ್ಯಕೀಯ ಸೇವಾ ಸೌಲಭ್ಯ, ಸೇವಾ ಹಿರಿತನದ ಆಧಾರದಲ್ಲಿ ಭಡ್ತಿ ಮೊದಲಾದ ಸವಲತ್ತುಗಳನ್ನು ನೀಡದೆ ಕನಿಷ್ಠ ವೇತನದಲ್ಲಿ ಜೀತದಾಳುಗಳಂತೆ ದುಡಿಸುತ್ತಿದ್ದು, ನಮ್ಮ ಹೋರಾಟಕ್ಕೆ ನ್ಯಾಯ ಸಿಗದಿದ್ದಲ್ಲಿ ಮುಂದೆ ಗ್ರಾಮೀಣ ಪ್ರದೇಶದ ಜನತೆಯನ್ನು ಸೇರಿಸಿಕೊಂಡು ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಗ್ರಾಮೀಣ ಅಂಚೆ ಸೇವಕರ ಜಂಟಿ ಕ್ರಿಯಾ ಸಮಿತಿಯ ಪುತ್ತೂರು ವಿಭಾಗೀಯ ಕರ‍್ಯರ‍್ಶಿ ಹಾಗೂ ವಲಯ ಕೋಶಾಧಿಕಾರಿ ಆಗಿರುವ ಸುನಿಲ್ ದೇವಾಡಿಗ ಅವರು ಎಚ್ಚರಿಸಿದರು.
ಗ್ರಾಮೀಣ ಅಂಚೆ ನೌಕರರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಪುತ್ತೂರು,ಸುಳ್ಯ, ಕಡಬ, ಬಂಟ್ವಾಳ ಮತ್ತು ಬೆಳ್ತಂಗಡಿ ತಾಲೂಕಿನ ಗ್ರಾಮೀಣ ಅಂಚೆ ನೌಕರರು ಪುತ್ತೂರಿನ ಪ್ರಧಾನ ಅಂಚೆ ಕಚೇರಿಯ ಎದುರು ನಡೆಸುತ್ತಿರುವ ಅನರ‍್ಧಿಷ್ಠಾವಧಿ ಪ್ರತಿಭಟನೆ ಎರಡನೇ ದಿನವಾದ ಮಂಗಳವಾರವೂ ಮುಂದುವರಿದಿದ್ದು, ಅವರು ಎರಡನೇ ದಿನದ ಪ್ರತಿಭಟನೆಯನ್ನುದ್ದೇಶಿಸಿ ಅವರು ಮಾತನಾಡಿದರು.ಗ್ರಾಮೀಣ ಅಂಚೆ ನೌಕರರ ಬಗ್ಗೆ ಕೇಂದ್ರ ರ‍್ಕಾರ ಮತ್ತು ಅಂಚೆ ಇಲಾಖೆ ತಳೆದಿರುವ ನಿರ್ಲಕ್ಷ್ಯo ಧೋರಣೆಯೇ ನಾವಿಂದು ಪ್ರತಿಭಟನೆಗಿಳಿಯಲು ಕಾರಣ. ಕಮಲೇಶ್ಚಂದ್ರ ವರದಿಯ ಜಾರಿಗೆ ಮೀನಮೇಷ ಎಣಿಸಲಾಗುತ್ತಿದೆ.
ನಮ್ಮ ಬೇಡಿಕೆಗಳನ್ನು ಈಡೇರಿಸದಿದ್ದರೂ ಅವೈಜ್ಞಾನಿಕ ಗುರಿಗಳನ್ನು ನೀಡಿ, ಒತ್ತಡ ಹಾಕಿ ಜೀತದಾಳುಗಳಂತೆ ದುಡಿಸುತ್ತಿರುವುದು ಇಲಾಖೆ ಮತ್ತು ಕೇಂದ್ರ ರ‍್ಕಾರಕ್ಕೆ ನಾಚಿಕೆಯಾಗಬೇಕು ಎಂದ ಅವರು ಕನಿಷ್ಠ ನಾಗರಿಕ ಸೌಲಭ್ಯಕ್ಕಾಗಿ ನಾವು ಪ್ರತಿಭಟನೆಗಿಳಿದಿದ್ದೇವೆ. ಬೇಡಿಕೆ ಈಡೇರುವ ತನಕ ಹೋರಾಟ ಮುಂದುವರಿಸಬೇಕಾಗಿದೆ. ಗ್ರಾಮೀಣ ಭಾಗದ ಅಂಚೆ ನೌಕರರು ತಮ್ಮ ತಮ್ಮ ಅಂಚೆ ಕಚೇರಿಗಳನ್ನು ಬಂದ್ ಮಾಡಿ, ಎಲ್ಲಾ ಸಂಘಟನೆಯವರು ಒಟ್ಟಾಗಿ ಪುತ್ತೂರಿನ ಪ್ರಧಾನ ಅಂಚೆ ಕಚೇರಿಯ ಮುಂದೆ ಬೆಳಿಗ್ಗಿನಿಂದ ಮಧ್ಯಾಹ್ನ 2 ಗಂಟೆ ತನಕ ಬೇಡಿಕೆ ಈಡೇರುವ ತನಕ ಪ್ರತಿಭಟನೆ ನಡೆಸಬೇಕಾಗಿದೆ ಎಂದರು.

ಗ್ರಾಮೀಣ ಅಂಚೆ ಸೇವಕರ ಜಂಟಿ ಕ್ರಿಯಾ ಸಮಿತಿಯ ಪುತ್ತೂರು ವಿಭಾಗೀಯ ಘಟಕದ ಅಧ್ಯಕ್ಷ ವಿಠಲ.ಎಸ್.ಪೂಜಾರಿ, ಕೋಶಾಧಿಕಾರಿ ಕಮಲಾಕ್ಷ, ಸಂಘಟನೆಯ ಪದಾಧಿಕಾರಿಗಳಾದ ಕಿರಣ್ ಬೆಳ್ತಂಗಡಿ, ಶೇಖರ್ ಬೆಳ್ತಂಗಡಿ,ಗೋಪಾಲಕೃಷ್ಣ ಸುಳ್ಯ, ಅಪ್ಪಯ್ಯ ನಾಯಕ್ ಕಾವು, ನಿವೃತ್ತ ಗ್ರಾಮೀಣ ಅಂಚೆ ಪಾಲಕರಾದ ಪ್ರಮೋದ್‌ಕುಮಾರ್ ಬಳೆಂಜ,ಗಣೇಶ್ ರೈ ಮತ್ತಿತರರು ಇದ್ದರು.



