ಮೂಲ್ಕಿ ತಾಲೂಕು ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿ ಗಣೇಶ ಅಮೀನ್ ಸಂಕಮಾರ್
ಮೂಲ್ಕಿ ತಾಲೂಕು ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ತುಳು ಕನ್ನಡ ಸಾಹಿತಿ ಡಾ. ಗಣೇಶ ಅಮೀನ್ ಸಂಕಮಾರ್ ಆಯ್ಕೆಯಾಗಿದ್ದಾರೆ ಎಂದು ದ.ಕ. ಜಿಲ್ಲಾ ಕ.ಸಾ.ಪ ಅಧ್ಯಕ್ಷ ಡಾ| ಎಂ.ಪಿ. ಶ್ರೀನಾಥ್ ತಿಳಿಸಿದ್ದಾರೆ. ಡಿಸೆಂಬರ್ ೨೭ರ ಬುಧವಾರ ಮೂಲ್ಕಿ ಕಾರ್ನಾಡು ಸರಕಾರಿ ಪದವೀಪೂರ್ವ ಕಾಲೇಜಿನಲ್ಲಿ ಸಾಹಿತ್ಯ ಸಮ್ಮೇಳನ ನಡೆಯಲಿದೆ.

ಗಣೇಶ್ ಸಂಕಮಾರ್ ಅವರು ತುಳು ಕನ್ನಡ ಜನಪದ ವಿದ್ವಾಂಸರಾಗಿ ಪ್ರಸಿದ್ಧರಾಗಿದ್ದಾರೆ. ಮೂವತ್ತೂರು ವರ್ಷಗಳ ಕಾಲ ಉಪನ್ಯಾಸಕರಾಗಿ, ಸಂತ ಅಲೋಶಿಯಸ್ ಕಾಲೇಜಿನಲ್ಲಿ ಡೀನ್ ಆಗಿ, ಕಾಟಿಪಳ್ಳ ನಾರಾಯಣಗುರು ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿದ್ದು, ಸಾವಿರದ ಸತ್ಯಗಳು, ನಿನಾದ, ಮಣ್ಣಿನೊಳಗಿನ ಅನ್ನ, ನುಡಿಸಿಂಗಾರ, ಬ್ರಹ್ಮ ಬಲಾಂಡಿ, ಧರ್ಮರಸು ಉಳ್ಳಾಯ, ಕರ್ಮ, ಅಗೋಳಿ ಮಂಜಣೆ ಸೇರಿದಂತೆ ಕನ್ನಡ ತುಳುವಿನಲ್ಲಿ ೧೮ ಕೃತಿಗಳನ್ನು ಪ್ರಕಟಿಸಿದ್ದಾರೆ. ಜಾನಪದ ಶಬ್ದ ಶಕ್ತಿ ವಿಷಯದಲ್ಲಿ ಸಂಶೋಧನೆಗಾಗಿ ಮಂಗಳೂರು ವಿವಿಯಿಂದ ಡಾಕ್ಟರೇಟ್ ಪದವಿ ಪಡೆದಿದ್ದಾರೆ. ದೇಶ ವಿದೇಶಗಳಲ್ಲಿ ಐದುಸಾವಿರಕ್ಕೂ ಹೆಚ್ಚು ಉಪನ್ಯಾಸಗಳನ್ನು ನೀಡಿದ್ದಾರೆ. ಪತ್ರಿಕೆಗಳಲ್ಲಿ ಅಂಕಣ, ಬರಹಗಳು ಪ್ರಕಟವಾಗುತ್ತಲೇ ಇವೆ. ರೇಡಿಯೋ ದೂರದರ್ಶನಗಳಲ್ಲಿ ಸಾಹಿತ್ಯ ಸಂಸ್ಕೃತಿಗಳ ಬಗ್ಗೆ ಕಾರ‍್ಯಕ್ರಮಗಳನ್ನು ನೀಡುತ್ತ ಬಂದಿದ್ದಾರೆ. ಕೃಷಿಕರು, ಜನಪದ ಕ್ಷೇತ್ರಕ್ಕೂ ಸಾಕಷ್ಟು ಕೊಡುಗೆ ನೀಡಿದ್ದಾರೆ. ತುಳು ಸಾಹಿತ್ಯ ಅಕಾಡಮಿ ಸದಸ್ಯರಾಗಿ, ಪಾವಂಜೆಯಲ್ಲಿ ತುಳು ಅಧ್ಯಯನ ಕೇಂದ್ರದ ಸ್ಥಾಪನೆ ಹೀಗೆ ಕ್ರಿಯಾಶೀಲರು.



