ದಕ್ಷಿಣ ಕನ್ನಡ : ಶಿಕ್ಷಣ ಕಾಶಿ ಮೂಡಬಿದರೆಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನವು ತನ್ನ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಒಟ್ಟು ನಾಲ್ಕು ದಿನಗಳ ‘ಆಳ್ವಾಸ್ ವಿರಾಸತ್-2023 ರಾಷ್ಟ್ರೀಯ ಸಾಂಸ್ಕೃತಿಕ ಕಾರ್ಯಕ್ರಮ ಗುರುವಾರ ಆರಂಭಗೊಂಡಿತು. ಕಾರ್ಯಕ್ರಮವನ್ನು ಕರ್ನಾಟಕ ರಾಜ್ಯಪಾಲರು ಉದ್ಘಾಟಿಸಿದರು, ‘ವಸುಧೈವ ಕುಟುಂಬಕಂ ಪರಿಕಲ್ಪನೆ ಆಳ್ವಾಸ್ ಶಿಕ್ಷಣ ಸಂಸ್ಥೆಯಲ್ಲಿ ಸಾಕಾರಗೊಳ್ಳುತ್ತಿರುವುದಕ್ಕೆ ತಮ್ಮ ಉದ್ಘಾಟನಾ ಭಾಷಣದಲ್ಲಿ ಸಂತಸ ವ್ಯಕ್ತಪಡಿಸಿದರು .
ಅಧ್ಯಕ್ಷತೆ ವಹಿಸಿದ್ದ ಧರ್ಮಸ್ಥಳದ ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆ, ‘ಆಳ್ವಾಸ್‌ನಲ್ಲಿ ಜ್ಞಾನದ ಜಾತ್ರೆ ಮತ್ತು ಯಾತ್ರೆ ನಡೆಯುತ್ತಿದೆ. ಮಕ್ಕಳಿಗೆ ಪಠ್ಯ ಶಿಕ್ಷಣದ ಜೊತೆಗೆ ಸಂಸ್ಕೃತಿ, ಸಂಸ್ಕಾರದ ಶಿಕ್ಷಣ ಆಳ್ವಾಸ್ ನೀಡುತ್ತಿದೆ ಜ್ಞಾನದ ಜೊತೆಗೆ ವಿಜ್ಞಾನ ಬೆಳೆಯಬೇಕು. ಇವೆಲ್ಲವೂ ಆಳ್ವಾಸ್ ಶಿಕ್ಷಣ ಸಂಸ್ಥೆಯಲ್ಲಿ ದೊರೆಯುತ್ತಿರುವುದಕ್ಕೆ ಶಿಕ್ಷಣ ಸಂಸ್ಥೆಯನ್ನು ಅಭಿನಂದಿಸಿದರು.

ಆಳ್ವಾಸ್ ವಿರಾಸತ್ ಕಾರ್ಯಕ್ರಮಕ್ಕೆ ಎಲ್ಲರನ್ನು ಆಳ್ವಾಸ್ ಶಿಕ್ಷಣ ಸಂಸ್ಥೆಯ ಮುಖ್ಯಸ್ಥ ಡಾಕ್ಟರ್ ಮೋಹನ ಆಳ್ವ ಸ್ವಾಗತಿಸಿದರು, ಹಾಗೂ ಕಾರ್ಯಕ್ರಮದಲ್ಲಿ ಉಪಸ್ಥಿತರಿರುವಂತೆ ವಿನಂತಿಸಿದರು.
ಆಳ್ವಾಸ್ ವಿರಾಸತ್‌ನ ಎರಡನೇ ದಿನವೂ ಜನ ಸಾಗರವೇ ಹರಿದು ಬಂದಿದೆ. ಬೆಳಗ್ಗಿನಿಂದಲೇ ಮಕ್ಕಳು ಹಿರಿಯರು ಸೇರಿದಂತೆ ಲಕ್ಷಾಂತರ ಮಂದಿ ಆಗಮಿಸುತ್ತಲೇ ಇದ್ದರು.
ಸಂಜೆಯ ಸಂಗೀತ ಕಾರ್ಯಕ್ರಮದ ವೇಳೆ ಜನ ಸಾಗರವೇ ಹರಿದು ಬಂದಿದೆ. ಬೆನ್ನಿ ದಯಾಳ್ ಸಂಗೀತ ಕಾರ್ಯಕ್ರಮದ ಸಂಗೀತ ಕಾರ್ಯಕ್ರಮಕ್ಕೆ ಒಂದು ಗಂಟೆ ಮೊದಲೇ ಜನ ಬಂದು ಕುರ್ಚಿ ಅಲಂಕರಿಸಿದ್ದರು. ಸುಮಾರು 60 ಸಾವಿರ ಮಂದಿ ಕುಳಿತುಕೊಳ್ಳುವ ಸಾಮರ್ಥ್ಯದ ಸಭಾಂಗಣದ ವೇದಿಕೆ ಸಂಪೂರ್ಣ ಭರ್ತಿಯಾಗಿತ್ತು. ಆಹಾರ ಮೇಳ, ಪ್ರದರ್ಶನ ಮಳಿಗೆಗಳು, ಕೃಷಿ ಮೇಳ ಸೇರಿದಂತೆ ಎಲ್ಲ ಮೇಳಗಳೂ ಜನರಿಂದ ತುಂಬಿತ್ತು. ಜಿಲ್ಲೆಯ ವಿವಿಧ ಶಾಲಾ ಕಾಲೇಜುಗಳಿಂದಲೂ ವಿದ್ಯಾರ್ಥಿಗಳು ಆಗಮಿಸಿದ್ದರು. ಊರ ಪರವೂರ ನಾಗರಿಕರು ಕಾರ್ಯಕ್ರಮದಲ್ಲಿ ಕುಟುಂಬ ಸಹಿತ ಕಾರ್ಯಕ್ರಮಕ್ಕೆ ಆಗಮಿಸಿದ್ದರು.





ಆಳ್ವಾಸ್ ವಿರಾಸತ್‌ನ ಮೂರನೇ ದಿನವಾದ ಶನಿವಾರ ಸಂಜೆ 6ರಿಂದ ಖ್ಯಾತ ಚಲನಚಿತ್ರ ಹಿನ್ನೆಲೆ ಗಾಯಕಿ ಶ್ರೇಯಾ ಘೋಷಾಲ್ ಅವರಿಂದ ಭಾವ ಲಹರಿ ಸಂಗೀತ ಕಾರ್ಯಕ್ರಮ ನಡೆಯಿತು. ಬಳಿಕ ರಾತ್ರಿ 8 ರಿಂದ ಆಳ್ವಾಸ್ ಸಾಂಸ್ಕೃತಿಕ ವೈಭವ ಕಾರ್ಯಕ್ರಮ ನಡೆಯಿತು.
ವಿರಾಸತ್‌ನ ಮೂರನೇ ದಿನವಾದ ಶನಿವಾರವೂ ಸಪ್ತ ಮೇಳ ಗಮನ ಸೆಳೆಯಿತು. ಮುಂಡ್ರುದೆಗುತ್ತು ಕೆ. ಅಮರನಾಥ ಶೆಟ್ಟಿ ಆವರಣದಲ್ಲಿ ಆಯೋಜಿಸಲಾದ ಕೃಷಿ ಮೇಳ, ಆಹಾರ ಮೇಳ, ಫಲಪುಷ್ಪ ಮೇಳ, ಕರಕುಶಲ ಮತ್ತು ಪ್ರಾಚ್ಯವಸ್ತು ಪ್ರದರ್ಶನ ಮೇಳ, ಚಿತ್ರಕಲಾ ಮೇಳ, ಕಲಾಕೃತಿಗಳ ಪ್ರದರ್ಶನ, ಛಾಯಾಚಿತ್ರಗಳ ಪ್ರದರ್ಶನವನ್ನು ಸಾವಿರಾರು ಮಂದಿ ವೀಕ್ಷಿಸಿದರು.
ಡಿ. 17ರಂದು ಸಂಜೆ 5.15ರಿಂದ ಆಳ್ವಾಸ್ ವಿರಾಸತ್ 2023 ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದ್ದು, ಡಾ| ಮೈಸೂರು ಮಂಜುನಾಥ್, ಡಾ| ಪ್ರವೀಣ್ ಗೋಡ್ಖಿಂಡಿ ಮತ್ತು ವಿಜಯ ಪ್ರಕಾಶ್ ಅವರಿಗೆ ವಿರಾಸತ್ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ. 6.30ರಿಂದ 7.15ರ ವರೆಗೆ ನಡೆಯುವ ತಾಳ-ವಾದ್ಯ-ಸಂಗೀತದಲ್ಲಿ ಡಾ| ಮೈಸೂರು ಮಂಜುನಾಥ್, ಡಾ| ಪ್ರವೀಣ್ ಗೋಡ್ಖಿಂಡಿ, ವಿಜಯ ಪ್ರಕಾಶ್ ಮತ್ತು ಬಳಗ ಮೋಡಿ ಮಾಡಲಿದೆ. ಆದೇ ರೀತಿ, ಸಂಜೆ 7.30 ರಿಂದ 9.30ರ ವರೆಗೆ ಖ್ಯಾತ ಚಲನಚಿತ್ರ ಗಾಯಕ ವಿಜಯ ಪ್ರಕಾಶ್ ಅವರಿಂದ ಸಂಗೀತ ರಸಸಂಜೆ ನಡೆಯಲಿದೆ. ರಾತ್ರಿ 9.30 ರಿಂದ 10.15ರ ವರೆಗೆ ಆಳ್ವಾಸ್ ಸಾಂಸ್ಕೃತಿಕ ವೈಭವ ಜರಗಲಿದೆ.
ಆಳ್ವಾಸ್ ವಿರಾಸತ್‌ಗೆ ಪ್ರತೀದಿನ ಸಾವಿರಾರು ಮಂದಿ ಆಗಮಿಸಿದ್ದರೂ, ಕ್ಯಾಂಪಸ್‌ನ ಸುಮಾರು 200 ಎಕರೆ ಪ್ರದೇಶದ , ಸ್ವಚ್ಛತೆಗೆ ಆದ್ಯತೆ ನೀಡಲಾಗಿದೆ . ಟ್ರಾಲಿ, ಟ್ರಾಕ್ಟರ್, ಲಾರಿಯಲ್ಲಿ ತ್ಯಾಜ್ಯ ನಿರ್ವಹಣೆ ಮಾಡುತ್ತಿದ್ದು, ಅಲ್ಲಲ್ಲಿ ಕಸದ ಡಬ್ಬಿ ಇಡಲಾಗಿದೆ. ಸ್ವಚ್ಛತೆಯ ನಿಟ್ಟಿನಲ್ಲಿ ಬೆಳಗ್ಗೆ 8.30ರಿಂದ ರಾತ್ರಿ 11.30ರ ವರೆಗೆ ಸುಮಾರು ನೂರಕ್ಕೂ ಅಧಿಕ ಮಂದಿ ಕೆಲಸ ನಿರ್ವಹಿಸುತ್ತಿದ್ದಾರೆ. ಆಹಾರ ಮೇಳದಲ್ಲಿ ಉಪಯೋಗಿಸುವ ನೀರಿನ ಸ್ವಚ್ಛತೆಯ ಬಗ್ಗೆಯೂ ಕಾಳಜಿ ವಹಿಸಲಾಗಿದೆ . ಹಸಿ ಕಸ, ಒಣ ಕಸ ಮತ್ತು ಪ್ಲಾಸ್ಟಿಕ್ ಅನ್ನು ಪ್ರತ್ಯೇಕವಾಗಿ ಬೇರ್ಪಡಿಸಿ ಸಂಸ್ಕರಣೆ ಮಾಡಲಾಗುತ್ತದೆ. ಪ್ಲಾಸ್ಟಿಕ್ ಬಳಕೆಯನ್ನು ಕಡಿಮೆ ಮಾಡಲಾಗಿದೆ.
ಕಾರ್ಯಕ್ರಮದ ಬಗ್ಗೆ ಮಾತನಾಡಿದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಮುಖ್ಯಸ್ಥ, ವಿರಾಸತ್ ಸಂಘಟಕ ಡಾಕ್ಟರ್ ಮೋಹನ ಆಳ್ವ ಮಾತನಾಡಿ 28 ವರ್ಷಗಳ ಹಿಂದೆ ಆರಂಭಿಸಿದ ವಿರಾಸತ್ ಯಶಸ್ಸಿನ ಹಾದಿಯಲ್ಲಿ ಸಾಗುತ್ತಿದೆ. ಒಂದು ಜಿಲ್ಲೆಗೆ ಸೀಮಿತವಾಗಿದ್ದ ಈ ಕಾರ್ಯಕ್ರಮ ಜಾಗತಿಕ ಮಟ್ಟಕ್ಕೆ ವಿಸ್ತರಿಸಿರುವುದು ಮನಸ್ಸಿಗೆ ಸಂತೋಷ ನೀಡಿದೆ ಎಂದರು.













