ಮಂಗಳೂರು: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ದ.ಕ. ಜಿಲ್ಲೆಯ ಸೌಜನ್ಯಾ ಪರ ಹೋರಾಟ ಸಮಿತಿ ನೋಟ ಅಭಿಯಾನ ಹಮ್ಮಿಕೊಂಡಿದ್ದು, ಹೋರಾಟ ಗಾರರು ಈ ಬಾರಿ ನೋಟ ಮತ ಚಲಾಯಿಸುವ ಮೂಲಕ ರಾಜಕೀಯ ಪಕ್ಷಗಳಿಗೆ ಎಚ್ಚರಿಕೆ ನೀಡಲು ಮುಂದಾಗಿದ್ದಾರೆ ಎಂದು ಸಮಿತಿಯ ಮುಖಂಡ ಗಿರೀಶ್ ಮಟ್ಟಣ್ಣನವರ್ ತಿಳಿಸಿದ್ದಾರೆ.

ಶುಕ್ರವಾರ ಮಂಗಳೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಕರಣ ನಡೆದು 11 ವರ್ಷ ಕಳೆದರೂ ಯಾವುದೇ ರಾಜಕೀಯ ಪಕ್ಷಗಳು ಸ್ಪಂದನೆ ನೀಡಿಲ್ಲ. ಆದ್ದರಿಂದ ಈ ಬಾರಿ ನೋಟಕ್ಕೆ ಮತಚಲಾಯಿಸಿ ಗಮನ ಸೆಳೆಯಲು ಉದ್ದೇಶಿಸಲಾಗಿದೆ. ದ.ಕ. ಹಾಗೂ ಉಡುಪಿಯಲ್ಲಿ ಪ್ರತಿ ವಿಧಾನಸಭಾ ಕ್ಷೇತ್ರವಾರು ಅಭಿಯಾನ ಹಮ್ಮಿಕೊಳ್ಳುತ್ತಿದ್ದು, ಸುಳ್ಯದಲ್ಲಿ ಎ. 24ರಂದು ನೋಟ ಜನಜಾಗೃತಿ ಸಭೆ ಹಮ್ಮಿಕೊಳ್ಳಲಾಗಿದೆ ಎಂದರು.
ನೋಟ ಬಗ್ಗೆ ಜನ ಜಾಗೃತಿ ಅಗತ್ಯವಿದೆ ಎಂದು ನ್ಯಾಯಾಲಯವೇ ಹೇಳಿದೆ. ಚುನಾವಣಾ ಆಯೋಗವೂ ನಮ್ಮ ಈ ಅಭಿಯಾನಕ್ಕೆ ಸಹಕಾರ ನೀಡುವ ಜೊತೆ ಹೆಣ್ಣು ಮಕ್ಕಳ ಬಗ್ಗೆ ಪ್ರಾಧಾನ್ಯತೆ ನೀಡುವ ಈ ಅಭಿಯಾನಕ್ಕೆ ಜನರು ಸಹಕಾರ ನೀಡಬೇಕು ಎಂದರು.
ಚುನಾವಣೆ ಹಿನ್ನೆಲೆಯಲ್ಲಿ 50 ಸಾವಿರಕ್ಕಿಂತ ಹೆಚ್ಚಿನ ಹಣ ಸಾಗಿಸಲು ನಿರ್ಬಂಧ ಇದೆ. ಆದರೆ ಸಂಘದ ಹೆಸರಿನಲ್ಲಿ ಬಡ್ಡಿ ದಂಧೆಯಲ್ಲಿ ಸಂಗ್ರಹಿಸಿದ ಅಕ್ರಮ ಲಕ್ಷಗಟ್ಟಲೆ ಹಣ ಶುಕ್ರವಾರ, ಶನಿವಾರ ನಿರ್ಭೀತಿಯಿಂದ ಸಾಗಿಸಲಾಗುತ್ತಿದೆ ಎಂದು ಆರೋಪಿಸಿದ ಗಿರೀಶ್ ಮಟ್ಟಣ್ಣನವರ್, ಚುನಾವಣಾ ಆಯೋಗ ಈ ಬಗ್ಗೆ ಗಮನಹರಿಸಬೇಕು ಎಂದು ಆಗ್ರಹಿಸಿದರು. ದ.ಕ. ಹಾಗೂ ಉಡುಪಿಯ ಕರಾವಳಿ ಭಾಗದಲ್ಲಿ ಈ ಅಭಿಯಾನ ಹಮ್ಮಿಕೊಳ್ಳುತ್ತಿದ್ದು, ಸುಳ್ಯದಲ್ಲಿ ಎ.24ರಂದು ನೋಟ ಜನಜಾಗೃತಿ ಸಭೆ ನಡೆಸುತ್ತಿರುವುದಾಗಿ ಪ್ರಸನ್ನ ರವಿ ತಿಳಿಸಿದರು. ಈ ಸುದ್ದಿಗೋಷ್ಠಿಯಲ್ಲಿ ತಮ್ಮಣ್ಣ ಶೆಟ್ಟಿ, ಜಯನ್ ಉಪಸ್ಥಿತರಿದ್ದರು.



