ಆಗುಂಬೆ ಘಾಟ್‌ನ ಸೂರ್ಯಾಸ್ತ ಸ್ಥಳದ ರಿಟೈನರ್ ಗೋಡೆಯ ಬಳಿ ಬಿರುಕು ಕಂಡುಬಂದಿದೆ. ಭಾರಿ ವಾಹನಗಳ ಓಡಾಟಕ್ಕೆ ತಡೆಗೋಡೆ ಕುಸಿದು ಬೀಳುವ ಸಾಧ್ಯತೆ ಇರುವುದರಿಂದ ಘಾಟಿ ಬಂದ್ ಆಗುವ ಶಂಕೆ ಎದುರಾಗಿದೆ. ಕರಾವಳಿ ಮಲೆನಾಡನ್ನು ಸಂಪರ್ಕಿಸುವ ಆಗುಂಬೆ ಘಾಟಿಯ ಸೂರ್ಯಾಸ್ತ ಸ್ಥಳದ ಬಳಿಯ ರಸ್ತೆಯ ತಡೆಗೋಡೆಯ ಬಳಿ ಬಿರುಕು ಕಂಡಿದ್ದು ಘನ ವಾಹನಗಳ ಸಂಚಾರದಿಂದ ತಡೆಗೋಡೆ ಕುಸಿದು ಘಾಟಿ ಬಂದ್ ಆಗುವ ಭೀತಿ ಎದುರಾಗಿದೆ.

ಶಿವಮೊಗ್ಗ ಜಿಲ್ಲಾ ವ್ಯಾಪ್ತಿಯ 14ನೇ ತಿರುವು ಸೂರ್ಯಾಸ್ತ ಸ್ಥಳದ ಬಳಿ ಹಾಗೂ ಘಾಟಿ ಆರಂಭದ ಮಧ್ಯೆ ಘನ ವಾಹನಗಳು ರಸ್ತೆಯ ಬದಿಯಲ್ಲಿ ಸಂಚರಿಸಿದರೆ ಸಂಪೂರ್ಣ ಕುಸಿಯುವ ಸ್ಥಿತಿ ಇದೆ. ಪ್ರಸ್ತುತ ಈ ಕಿರಿದಾದ ಘಾಟಿಯಲ್ಲಿ ಹಲವಾರು ಘನವಾಹನಗಳು ಸಂಚರಿಸುತ್ತಿವೆ. ಈ ಹಿಂದೆ ಕೆಲವೆಡೆ ಘನ ವಾಹನಗಳು ಢಿಕ್ಕಿ ಹೊಡೆದ ಪರಿಣಾಮ ತಡೆ ಗೋಡೆಗಳಿಗೆ ಹಾನಿಯಾಗಿತ್ತು. ಇದೀಗ ಘಾಟಿ ಆರಂಭದಲ್ಲಿ ರಸ್ತೆ ತೀರಾ ಕಿರಿದಾಗಿದ್ದು, ಒಂದು ವಾಹನ ಸಂಚರಿಸುವುದೂ ಕಷ್ಟ ಎಂಬಂತಿದೆ. ಇಂಥ ಸಂದರ್ಭದಲ್ಲಿ ಘನವಾಹನಗಳ ಸಂಚಾರದಿಂದ ಸಮಸ್ಯೆ ಬಿಗಡಾಯಿಸಬಹುದು ಎಂಬುದು ಸಾರ್ವಜನಿಕರ ಆತಂಕ.
ಶಾಲೆಗಳಿಗೆ ಬೇಸಿಗೆ ರಜೆ ಇರುವುದರಿಂದ ಘಾಟಿ ಮಾರ್ಗವಾಗಿ ಸಂಚರಿಸುವ ವಾಹನಗಳ ಸಂಖ್ಯೆ ಹೆಚ್ಚು. ರಿಟೈನರ್ ಗೋಡೆಯ ಬಿರುಕು ತಕ್ಷಣ ದುರಸ್ತಿ ಪಡಿಸದಿದ್ದರೆ ಮಳೆಗಾಲದಲ್ಲಿ ಗೋಡೆ ಕುಸಿಯುವ ಸಾಧ್ಯತೆಯಿದೆ. ಪ್ರತಿ ವರ್ಷ ಘಾಟಿ ಭಾಗದ ಕೆಲವು ಭಾಗಗಳು ಕುಸಿದು ಬೀಳುತ್ತಿದ್ದು, ಅವುಗಳನ್ನು ದುರಸ್ತಿ ಮಾಡುತ್ತಿಲ್ಲ. ಇದು ಕೂಡ ಬಹುತೇಕ ಘಾಟ್ ವಿಭಾಗ ದುರ್ಬಲವಾಗಲು ಕಾರಣವಾಗಿದೆ.ಶಿವಮೊಗ್ಗ, ಚಿಕ್ಕಮಗಳೂರು ಮತ್ತು ಸುತ್ತಮುತ್ತಲಿನ ಜನರು ವೈದ್ಯಕೀಯ ಚಿಕಿತ್ಸೆಗಾಗಿ ಕೆಎಂಸಿ ಮಣಿಪಾಲ ಆಸ್ಪತ್ರೆಯನ್ನು ಅವಲಂಬಿಸಿದ್ದಾರೆ. ಈ ಜನರಿಗೆ ಆಗುಂಬೆ ಘಾಟಿ ಬಹಳ ಮುಖ್ಯವಾಗಿದೆ. ಜಿಲ್ಲಾಡಳಿತ ಶೀಘ್ರ ಕ್ರಮ ಕೈಗೊಂಡು ಬಿರುಕು ಬಿಟ್ಟಿರುವುದನ್ನು ದುರಸ್ತಿ ಪಡಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಆಗುಂಬೆ ಘಾಟಿಯ ಅರ್ಧಭಾಗ ಶಿವಮೊಗ್ಗ ಜಿಲ್ಲಾ ವ್ಯಾಪ್ತಿಗೆ ಬರುವುದರಿಂದ ಅಲ್ಲಿನ ಜಿಲ್ಲಾಧಿಕಾರಿ ಜತೆ ಚರ್ಚಿಸಲಾಗಿದೆ. ಅವರು ಕೂಡಲೇ ಎಂಜಿನಿಯರ್‌ಗಳನ್ನು ಕಳುಹಿಸಿ ಪರಿಶೀಲನೆ ನಡೆಸಿ ಶೀಘ್ರ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.



