ಉಡುಪಿ: ಬೈಲೂರಿನ ಉಮಿಕ್ಕಲ್ ಬೆಟ್ಟದಲ್ಲಿ ನಿರ್ಮಾಣಗೊಂಡ ಪರಶುರಾಮ ಪ್ರತಿಮೆಯ ಉಳಿದ ಕಂಚಿನ ಅರ್ಧ ಭಾಗವನ್ನು ತೆರವು ಮಾಡುವ ಪ್ರಯತ್ನ ನಡೆದಿದ್ದು, ಆ ಮೂಲಕ ಹಗರಣಕ್ಕೆ ಸಾಕ್ಷಿಯಾಗಿದ್ದ ಕೊನೆಯ ಸಾಕ್ಷ್ಯವನ್ನು ನಾಶ ಮಾಡುವ ಪ್ರಯತ್ನ ಇದಾಗಿದೆ ಎಂದು ಕಾಂಗ್ರೆಸ್ ಮುಖಂಡ ಮುನಿಯಾಲು ಉದಯಕುಮಾರ್ ಶೆಟ್ಟಿ ಆರೋಪಿಸಿದ್ದಾರೆ.

ಉಡುಪಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪರಶುರಾಮ ಥೀಮ್ ಪಾರ್ಕ್ ಯೋಜನೆಯ ಕಾಮಗಾರಿಯಲ್ಲಿ ಭಾರೀ ಅವ್ಯವಹಾರ ನಡೆದಿದ್ದು, ಕಂಚಿನ ಪ್ರತಿಮೆಯ ಬದಲಿಗೆ ನಕಲಿ ಮೂರ್ತಿ ನಿರ್ಮಿಸಲಾಗಿದೆ. ಕಾರ್ಕಳದ ಶಾಸಕರು ಪರಶುರಾಮನ ನಕಲಿ ಮೂರ್ತಿ ನಿರ್ಮಿಸಿ ಜನರ ಧಾರ್ಮಿಕ ಭಾವನೆಗೆ ಧಕ್ಕೆ ತಂದಿದ್ದಾರೆ. ಅದಕ್ಕೆ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು.
ಬೈಲೂರಿನಲ್ಲಿ ಸುಸಜ್ಜಿತವಾದ ಥೀಮ್ ಪಾರ್ಕ್‌ನ ನಿರ್ಮಾಣವಾಗಬೇಕು. ಪರಶುರಾಮನ ಕಂಚಿನ ಪ್ರತಿಮೆ ಪ್ರತಿಷ್ಠಾಪನೆಗೊಳ್ಳಬೇಕು. ಆದರೆ ಇದಕ್ಕಾಗಿ ಈಗ ಮೂರ್ತಿಯ ನಿರ್ಮಾಣ ಗುತ್ತಿಗೆ ಪಡೆದಿರುವ ಶಿಲ್ಪಿ ಕೃಷ್ಣ ನಾಯಕ್ ಹಾಗೂ ಥೀಮ್ ಪಾರ್ಕ್ ನಿರ್ಮಾಣದ ಗುತ್ತಿಗೆ ಪಡೆದಿರುವ ನಿರ್ಮಿತಿ ಕೇಂದ್ರವನ್ನು ಬದಲಿಸಬೇಕು ಎಂದು ತಾವು ರಾಜ್ಯ ಸರಕಾರವನ್ನು ಒತ್ತಾಯಿಸುತ್ತೇವೆ. ರಾಜ್ಯದ ಅನೇಕ ಕಡೆಗಳಲ್ಲಿರುವ ಕೆಂಪೇಗೌಡ, ಶಿವಾಜಿ, ರಾಣಿ ಚೆನ್ನಮ್ಮ, ಮೈಸೂರು ಒಡೆಯರ್ ಮುಂತಾದವರ ಪ್ರತಿಮೆ ನಿರ್ಮಿಸಿದವರಿಂದ ಪರಶುರಾಮನ ಮೂರ್ತಿ ನಿರ್ಮಿಸಲಿ ಎಂದು ಅವರು ಆಗ್ರಪಡಿಸಿದರು.
ಕಾರ್ಕಳದಲ್ಲಿ ಸುನಿಲ್ ಕುಮಾರ್ ಅವರ ಸರಕಾರ ಅಧಿಕಾರದಲ್ಲಿದೆ. ಜನರಲ್ಲಿ ಕಂಚನ್ನು ಬೇಡಿಯಾದರೂ ಮೂರ್ತಿ ರಚಿಸಿ ಪ್ರತಿಷ್ಠಾಸುವುದಾಗಿ ಸುನಿಲ್ ಹೇಳಿದ್ದಾರೆ. ಹಾಗಾದರೂ ಮಾಡಿ ಮೂರ್ತಿ ನಿರ್ಮಿಸಿ ಪುಣ್ಯವನ್ನು ನೀವೆ ಇಟ್ಟುಕೊಳ್ಳಿ ಎಂದು ವ್ಯಂಗ್ಯವಾಡಿದರು.
ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ನಾಯಕರಾದ ರಮೇಶ್ ಕಾಂಚನ್, ಕೃಷ್ಣಮೂರ್ತಿ ಆಚಾರ್ಯ ಉಪಸ್ಥಿತರಿದ್ದರು



