ಸುಳ್ಯ: ತಾಲೂಕಿನ ಕಲ್ಮಡ್ಕ ಎಂಬಲ್ಲಿ ಅಪ್ರಾಪ್ತೆಯ ಮೇಲೆ ಅತ್ಯಾಚಾರವೆಸಗಿ ಗರ್ಭವತಿಯನ್ನಾಗಿಸಿದ ಪ್ರಕರಣ ನಡೆದಿದೆ. ಬಾಲಕಿಯನ್ನು ಗರ್ಭವತಿಯನ್ನಾಗಿಸಿದ ಆರೋಪಿ ಯುವಕನನ್ನು ಸುಳ್ಯ ಪೊಲೀಸರು ಸೋಮವಾರ ಬಂಧಿಸಿದ್ದಾರೆ. ಸುಳ್ಯ ತಾಲ್ಲೂಕಿನ ಕಲ್ಮಡ್ಕ ಗ್ರಾಮದ ನಿವಾಸಿ ಕಾರ್ತಿಕ್ ಬಂಧಿತ ಆರೋಪಿ. ಈತನ ವಿರುದ್ಧ ಪೋಕ್ಸೊ ಕಾಯ್ದೆ ಅಡಿ ಮೊಕದ್ದಮೆ ದಾಖಲಿಸಲಾಗಿದೆ.
ಆರೋಪಿಯು ಬಾಲಕಿಯೊಂದಿಗೆ ದೈಹಿಕ ಸಂಪರ್ಕ ಬೆಳೆಸಿದ್ದ. ಬಾಲಕಿಗೆ ಶುಕ್ರವಾರ (ಜುಲೈ 7) ಹೊಟ್ಟೆನೋವು ಕಾಣಿಸಿಕೊಂಡಿದ್ದು, ಸುಳ್ಯದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ವೈದ್ಯರು ಸ್ಕ್ಯಾನಿಂಗ್ ಮಾಡಿಸುವಂತೆ ಸಲಹೆ ನೀಡಿದ್ದರು. ಸ್ಕ್ಯಾನಿಂಗ್ ಮಾಡಿದಾಗ 4 ತಿಂಗಳ ಗರ್ಭಿಣಿ ಆಗಿರುವುದು ತಿಳಿದುಬಂದಿದೆ. ಈ ಬಗ್ಗೆ ವಿಚಾರಿಸಿದಾಗ ಕಲ್ಮಡ್ಕದ ಕಾರ್ತಿಕ್ ದೈಹಿಕ ಸಂಪರ್ಕ ಎಸಗಿದ್ದಾನೆ ಎಂದು ಆಕೆ ತಿಳಿಸಿದ್ದಾಳೆ. ತಾಯಿ ಸುಳ್ಯ ಠಾಣೆಯಲ್ಲಿ ದೂರು ನೀಡಿದ್ದು ಪ್ರಕರಣ ದಾಖಲಾಗಿದೆ.
 
								
 
															


