ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಸಂಸತ್ ಸದಸ್ಯತ್ವ ಅನರ್ಹ ಮಾಡುವ ಮೂಲಕ ಕೇಂದ್ರದ ಬಿಜೆಪಿ ಸರಕಾರ ದ್ವೇಷ ರಾಜಕಾರಣ ಮಾಡುತ್ತಿದೆ ಎಂದು ಆಪಾದಿಸಿ ಇಂದು ಕೆಪಿಸಿಸಿ ಮೌನ ಪ್ರತಿಭಟನೆಗೆ ಕರೆ ನೀಡಿದ್ದ ಹಿನ್ನೆಲೆಯಲ್ಲಿ ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಹಲವು ಪ್ರಮುಖರು ಬಾಯಿಗೆ ಬಟ್ಟೆ ಕಟ್ಟಿ ಪ್ರತಿಭಟಿಸಿದರು. ವಿವಿಧ ಘೋಷಣೆಗಳುಳ್ಳ ಭಿತ್ತಿಚಿತ್ರಗಳನ್ನು ಪ್ರತಿಭಟನಕಾರರು ಪ್ರದರ್ಶಿಸಿದರು.
ರಾಹುಲ್ ಗಾಂಧಿಯವರ ಸತ್ಯದ ನುಡಿಗಳನ್ನು ಸಹಿಸದ ಪ್ರಧಾನಿಯವರು ಅವರ ವಿರುದ್ಧ ಸೇಡಿನ ಕ್ರಮ ಅನುಸರಿಸುತ್ತಿದ್ದಾರೆ. ರಾಹುಲ್ ಗಾಂಧಿಯವರ ರಾಜಕೀಯ ಜೀವನ ಕೊನೆಗೊಳಿಸಲು ಯತ್ನಿಸಲಾಗುತ್ತಿದೆ ಎಂದು ಆರೋಪಿಸಿ ಈ ಪ್ರತಿಭಟನೆ ನಡೆದಿದೆ. ಪ್ರತಿಭಟನೆಯಲ್ಲಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್, ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೆವಾಲ, ಮಂತ್ರಿಗಳಾದ ಕೆ.ಎಚ್. ಮುನಿಯಪ್ಪ, ರಾಮಲಿಂಗಾರೆಡ್ಡಿ, ಬೋಸರಾಜ್, ಸಂಸದರು, ಶಾಸಕರು, ವಿಧಾನ ಪರಿಷತ್ ಸದಸ್ಯರು, ಕೆಪಿಸಿಸಿ ಪದಾಧಿಕಾರಿಗಳು, ಪಕ್ಷದ ಮುಂಚೂಣಿ ಘಟಕದ ಪದಾಧಿಕಾರಿಗಳು ಭಾಗವಹಿಸಿ ಮೌನ ಪ್ರತಿಭಟನೆಗೆ ಬೆಂಬಲ ಸೂಚಿಸಿದರು.






