ಸ್ಲೀಪರ್ ಕೋಚ್ ಬಸ್ ಮತ್ತು ಟೆಂಪೋ ಮಧ್ಯೆ ಭೀಕರ ರಸ್ತೆ ಅಪಘಾತ ಸಂಭವಿಸಿದ ಪರಿಣಾಮ ಎಂಟು ಮಕ್ಕಳು ಸೇರಿದಂತೆ ಒಟ್ಟು ಹನ್ನೆರಡು ಮಂದಿ ದಾರುಣವಾಗಿ ಸಾವನ್ನಪ್ಪಿರುವ ಘಟನೆ ರಾಜಸ್ಥಾನದಲ್ಲಿ ನಡೆದಿದೆ.
ರಾಜಸ್ಥಾನದ ಧೋಲ್‌ಪುರದಲ್ಲಿ ಈ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಬರಿ ಸದರ್ ಪೊಲೀಸ್ ಠಾಣೆ ವ್ಯಾಪ್ತಿಯ NH 11B ಯಲ್ಲಿ ಸುನಿಪುರ್ ಗ್ರಾಮದ ಬಳಿ ನಡೆದ ಅಪಘಾತದಲ್ಲಿ ಸ್ಲೀಪರ್ ಕೋಚ್ ಬಸ್ ಟೆಂಪೋಗೆ ಡಿಕ್ಕಿ ಹೊಡೆದಿದೆ. ಈ ಭೀಕರ ಅಪಘಾತದಲ್ಲಿ 12 ಮಂದಿ ಸಾವನ್ನಪ್ಪಿದ್ದಾರೆ. ಮೃತರಲ್ಲಿ ಐವರು ಮಕ್ಕಳು, ಮೂವರು ಬಾಲಕಿಯರು, ಇಬ್ಬರು ಮಹಿಳೆಯರು ಹಾಗೂ ಓರ್ವ ಪುರುಷ ಸೇರಿದ್ದಾರೆ ಎಂದು ತಿಳಿದು ಬಂದಿದೆ.

ಸದ್ಯ ಈ ಭೀಕರ ರಸ್ತೆ ಅಪಘಾತದಲ್ಲಿ ಮೃತ ಪಟ್ಟವರ ಶವಗಳನ್ನು ಸ್ಥಳೀಯ ಸರ್ಕಾರಿ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದೆ. ಮೂವರಿಗೆ ಗಂಭೀರ ಗಾಯಗಳಾಗಿದ್ದು, ಅವರನ್ನು ಖಾಸಗಿ ಆಸ್ಪತ್ರೆಯಲ್ಲಿ ದಾಖಳಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಟೆಂಪೋದಲ್ಲಿ ಪ್ರಯಾಣಿಸುತ್ತಿದ್ದವರೆಲ್ಲರೂ ಬಾರಿ ನಗರದ ಗುಮತ್ ಮೊಹಲ್ಲಾ ನಿವಾಸಿಗಳು ಎಂದು ತಿಳಿದು ಬಂದಿದೆ.

ಪೊಲೀಸರು ನೀಡಿದ ಮಾಹಿತಿ ಪ್ರಕಾರ, ಅಪಘಾತದಲ್ಲಿ ಬಲಿಯಾದವರು ಸೇರಿದಂತೆ ಆ ಬಸ್‌ನಲ್ಲಿ ಇದ್ದವರೆಲ್ಲರೂ ಬರೌಲಿ ಗ್ರಾಮದ ತಮ್ಮ ಸಂಬಂಧಿಕರ ಸ್ಥಳದಲ್ಲಿ ನಡೆದ ಭಾತ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಹಿಂತಿರುಗುತ್ತಿದ್ದರು. ಅಪಘಾತದಲ್ಲಿ ಬಸ್‌ಗೂ ಹಾನಿಯಾಗಿದ್ದು, ಸದ್ಯ ಪೊಲೀಸರು ಬಸ್ ಅನ್ನು ಜಪ್ತಿ ಮಾಡಿದ್ದಾರೆ. ಈ ಅವಘಡ ಸಂಭವಿಸಿದಾಗ ಟೆಂಪೋದಲ್ಲಿ ಹೆಚ್ಚಿನ ಪ್ರಯಾಣಿಕರು ಗಾಢ ನಿದ್ದೆಯಲ್ಲಿದ್ದರು ಎಂದು ತಿಳಿದು ಬಂದಿದೆ.



