ಮಂಗಳೂರಿನ ಮಲ್ಲಿಕಟ್ಟೆಯ ಲೋಕೋಪಯೋಗಿ ನಿರೀಕ್ಷಣ ಮಂದಿರದ ಆವರಣದಲ್ಲಿ ಬೆಲೆಬಾಳುವ ಸಾಗುವಾನಿ, ದೇವದಾರು ಮರಗಳನ್ನು ಕಡಿದು ಸಾಗಿಸಿರುವ ಕುರಿತು ರಾಷ್ಟ್ರೀಯ ಪರಿಸರ ಸಂರಕ್ಷಣ ಒಕ್ಕೂಟ(ಎನ್‌ಇಸಿಎಫ್) ನೀಡಿದ ದೂರಿನಂತೆ ಅರಣ್ಯ ಇಲಾಖೆ ಪ್ರಕರಣ ದಾಖಲಿಸಿಕೊಂಡಿದೆ.

ನಿರೀಕ್ಷಣ ಮಂದಿರಕ್ಕೆ ಅಪಾಯವಿದೆ ಎಂದು ಹೇಳಿ ಲೋಕೋಪಯೋಗಿ ಇಲಾಖೆ ದೂರು ಸಲ್ಲಿಸಿದ ಹಿನ್ನೆಲೆಯಲ್ಲಿ 3 ಸಾಗುವಾನಿ, 1 ಉಪ್ಪಳಿಗೆ, 1 ಕಂಬ ಅಶೋಕ, ಹಾಗೂ 1 ದೇವದಾರು ಮರ ಕಡಿಯಲು ಅನುಮತಿ ನೀಡಲಾಗಿತ್ತು. ಆದರೆ ಇಲಾಖೆಯ ಅನುಮತಿ ಇಲ್ಲದೆ ದೇವದಾರು ಮರವನ್ನು ಸ್ಥಳದಿಂದ ಸಾಗಿಸಿರುವುದು ಕಂಡು ಬಂದ ಹಿನ್ನೆಲೆಯಲ್ಲಿ ಮರ ಕಡಿಯಲು ಗುತ್ತಿಗೆ ಪಡೆದ ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಮರ ಕಡಿಯುತ್ತಿರುವುದು ಎನ್‌ಇಸಿಎಫ್ ಸದಸ್ಯರೊಬ್ಬರ ಗಮನಕ್ಕೆ ಬಂದಿದ್ದು, ಮಂಗಳವಾರ ವಾಹನದಲ್ಲಿ ಮರ ಸಾಗಾಟ ಮಾಡುವ ವೇಳೆ ಅರಣ್ಯ ಸಂಚಾರ ದಳಕ್ಕೆ ಮಾಹಿತಿ ನೀಡಿದ್ದಾರೆ. ಮರ ಸಾಗಾಟದ ವಾಹನ ಹೊಯ್ಗೆ ಬಜಾರ್‌ನ ಇಲಾಖಾ ನಾಟ ಸಂಗ್ರಹಾಲಯದಲ್ಲಿರುವುದು ಪತ್ತೆಯಾಗಿದೆ. ವಾಹನವನ್ನು ಪರಿಶೀಲಿ ಸಿದಾಗ ಅದರಲ್ಲಿ ದೇವದಾರು ಜಾತಿಯ ಮರದ ಕಟ್ಟಿಗೆ ಇರುವುದು ಕಂಡು ಬಂದಿದೆ. ಚಾಲಕನಲ್ಲಿ ವಿಚಾರಿಸಿದಾಗ ಮರ ಸಾಗಾಟಕ್ಕೆ ಪರವಾನಿಗೆ ಇಲ್ಲ ಎಂದು ತಿಳಿಸಿದ್ದಾನೆ. ಅರಣ್ಯ ಸಂಚಾರಿ ದಳ ಅಧಿಕಾರಿಗಳು ಮಲ್ಲಿಕಟ್ಟೆಯ ಲೋಕೋಪಯೋಗಿ ನಿರೀಕ್ಷಣ ಮಂದಿರಕ್ಕೆ ಭೇಟಿ ನೀಡಿದಾಗ 4 ಸಾಗುವಾನಿ, 1 ಉಪ್ಪಳಿಗೆ, 1 ಕಂಬ ಅಶೋಕ, ಹಾಗೂ 1 ದೇವದಾರು ಮರಗಳನ್ನು ಕಡಿದಿರುವುದು ಕಂಡು ಬಂದಿದೆ. ವಿವಿಧ ಅಳತೆಯ 24 ಸಾಗುವಾನಿ ದಿಮ್ಮಿಗಳನ್ನು ದಾಸ್ತಾನು ಇರಿಸಿರುವುದು ಕಂಡು ಬಂದಿದೆ.



