ಮೂಡುಬಿದಿರೆ : ರಿಕ್ಷಾದಲ್ಲಿ ಅಕ್ರಮವಾಗಿ ಗೋವುಗಳನ್ನು ಹಿಂಸಾತ್ಮಕ ರೀತಿಯಲ್ಲಿ ಸಾಗಾಟ ಮಾಡುತ್ತಿರುವ ಖಚಿತ ಮಾಹಿತಿ ಮೇರೆಗೆ ಭಜರಂಗದಳ ಕಾರ್ಯಕರ್ತರು ಕಾರ್ಯಚರಣೆ ನಡೆಸಿ ಗೋವುಗಳನ್ನು ರಕ್ಷಿಸಿ ಪೊಲೀಸರಿಗೆ ಒಪ್ಪಿಸಿದ ಘಟನೆ ಅಳಿಯೂರಿನಲ್ಲಿ ನಡೆದಿದೆ.

ಮೂಡುಬಿದಿರೆ ತಾಲೂಕಿನ ಅಳಿಯೂರು ಎಂಬಲ್ಲಿ ಅತಿವೇಗವಾಗಿ ಓಡುತ್ತಿದ್ದ ರಿಕ್ಷಾವನ್ನು ಕಂಡು ಸಾರ್ವಜನಿಕರಿಗೆ ಸಂಶಯ ಮೂಡಿದ್ದು ಕೂಡಲೇ ಭಜರಂಗದಳ ಕಾರ್ಯಕರ್ತರಿಗೆ ವಿಷಯ ಮುಟ್ಟಿಸಿದ್ದಾರೆ.
ಅಳಿಯೂರು ಸುಮಂಗಲಿ ಸಭಾ ಭವನದ ಮುಂಭಾಗದಲ್ಲಿ ಆಟೋರಿಕ್ಷಾ ತಡೆದಾಗ ಅದರಲ್ಲಿ ಚಿಂತಾಜನಕ ಸ್ಥಿತಿಯಲ್ಲಿದ್ದ ಗೋವು ಪತ್ತೆಯಾಗಿದೆ. ಕೂಡಲೇ ರಿಕ್ಷಾದಲ್ಲಿದ್ದ ಇಬ್ಬರು ಅಲ್ಲಿಂದ ಪರಾರಿಯಾಗಿದ್ದು ಜಲಲುದ್ದೀನ್ ಎಂಬಾತನನ್ನು ತಡೆದು ನಿಲ್ಲಿಸಿ ಪೊಲೀಸರಿಗೆ ಒಪ್ಪಿಸಿದರು.
ಪಣಪಿಲ ಗುಡ್ಡಲಪಕ್ಕೆಯ ಕಂಬಳ ಓಟಗಾರ ದೀಕ್ಷಿತ್ ಎಂಬಾತ ಅಕ್ರಮವಾಗಿ ಗೋವನ್ನು ಮಾರಾಟ ಮಾಡಿದ್ದಾನೆ ಎಂದು ಜಲಲುದ್ದೀನ್ ಹೇಳಿಕೆ ನೀಡಿದ್ದು ಪೊಲೀಸರು ದೀಕ್ಷಿತ್ ಬಂಧನಕ್ಕೆ ಹುಡುಕಾಟ ನಡೆಸಿದ್ದಾರೆ ಎನ್ನಲಾಗಿದೆ.
ಗ್ರಾಮ ಪಂಚಾಯತ್ ಸದಸ್ಯರು ಹಾಗೂ ಗ್ಯಾರಂಟಿ ಯೋಜನೆಯ ಅನುಷ್ಠಾನ ಸಮಿತಿಯ ಅಧ್ಯಕ್ಷ ಕಾಂಗ್ರೆಸ್ ಮುಖಂಡ ಅರುಣ್ ಕುಮಾರ್ ಶೆಟ್ಟಿ ಸ್ಥಳಕ್ಕೆ ಆಗಮಿಸಿ ಭಜರಂಗದಳ ಕಾರ್ಯಕರ್ತರಿಗೆ ಬೆಂಬಲ ಸೂಚಿಸಿದ್ದಾರೆ. ಗೋವಿನ ಸ್ಥಿತಿ ಕಂಡು ಆಕ್ರೋಶ ವ್ಯಕ್ತಪಡಿಸಿದ ಅವರು ಪರಾರಿಯಾದ ಎಲ್ಲಾ ಆರೋಪಿಗಳನ್ನು ಬಂಧಿಸುವಂತೆ ಪೊಲೀಸರಲ್ಲಿ ಕೋರಿದ್ದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎನ್ನಲಾಗಿದೆ.



