ಮಂಗಳೂರು: ಉನ್ನತ ಶಿಕ್ಷಣ ಇಲಾಖೆಯ ಯಾವುದೇ ಆದೇಶಗಳನ್ನು ಪಾಲಿಸದೆ “ಅಶಿಸ್ತಿನಿಂದ ನಡೆದುಕೊಳ್ಳುತ್ತಿರುವ” ಬಂಟ್ವಾಳದ ಶ್ರೀ ವೆಂಕಟರಮಣ ಸ್ವಾಮಿ ಕಾಲೇಜಿಗೆ ಆಡಳಿತಾಧಿಕಾರಿಯನ್ನು ನೇಮಿಸುವಂತೆ ಸರಕಾರಕ್ಕೆ ಶಿಫಾರಸು ಮಾಡಲಾಗಿದೆ.

ಕಾಲೇಜು ಶಿಕ್ಷಣ ಇಲಾಖೆಯ ಮಂಗಳೂರಿನ ಪ್ರಾದೇಶಿಕ ಜಂಟಿ ನಿರ್ದೇಶಕರು ಮೇ ದಿನಾಂಕ ೧೭ರಂದು ಕಾಲೇಜು ಶಿಕ್ಷಣ ಇಲಾಖೆಯ ಆಯುಕ್ತರಿಗೆ ಬರೆದಿರುವ ಪತ್ರದಲ್ಲಿ ಸರಕಾರದ ನಿಯಮಗಳನ್ನು ಪಾಲಿಸದಿರುವ ಎಸ್.ವಿ.ಎಸ್. ಕಾಲೇಜಿಗೆ ಆಡಳಿತಾಧಿಕಾರಿಯನ್ನು ನೇಮಿಸುವಂತೆ ಶಿಫಾರಸು ಮಾಡಿ ಕೂಡಲೇ ಕ್ರಮ ವಹಿಸುವಂತೆ ಕೋರಿ ಬರೆದಿರುವ ಪತ್ರ ಮಾಹಿತಿ ಹಕ್ಕು ಅಧಿನಿಯಮದಡಿ ಲಭ್ಯವಾಗಿದೆ.
ಈ ಪತ್ರದಲ್ಲಿ ಜಂಟಿ ನಿರ್ದೇಶಕರು ಕಾಲೇಜು ವಾರ್ಷಿಕ ವೇತನ ತಖ್ತೆ ಅನುಮೋದನೆ ಪಡೆಯದಿರುವುದು, ನಿವೃತ್ತರಿಗೆ ಪಿಂಚಣಿ ಮಂಜೂರಾತಿಗೆ ಸಕಾಲದಲ್ಲಿ ದಾಖಲೆಗಳನ್ನು ಸಲ್ಲಿಸದಿರುವುದು, ಸೇವಾ ಪುಸ್ತಕ ನೀಡದಿರುವ ಬಗ್ಗೆ ಪತ್ರ ಬರೆದರೂ ಉತ್ತರಿಸದಿರುವುದು, ಎ.ಜಿ.ಪಿ ಬಾಕಿ ವೇತನ ಪ್ರಸ್ತಾವನೆ ಬಗ್ಗೆ ಕ್ರಮ ಕೈಗೊಳ್ಳದಿರುವುದು ಎಂಬಿತ್ಯಾದಿ ದೂರುಗಳನ್ನು ಪಟ್ಟಿ ಮಾಡಿದ್ದಾರೆ.

ಕಾಲೇಜು ನಿಗದಿತ ಕರ್ತವ್ಯ ನಿರ್ವಹಿಸಿರುವುದಿಲ್ಲ, ಅಧ್ಯಾಪಕರಿಗೆ ನಿಗದಿತ ಕಾರ್ಯಭಾರ ಇಲ್ಲದಿದ್ದರೂ ೨೦೨೩ರ ಆಗಸ್ಟ್ ನಿಂದ ವೇತನ ಪಾವತಿ ಮಾಡಲು ಕಾರಣರಾಗಿದ್ದಾರೆ ಎಂದು ಪತ್ರದಲ್ಲಿ ಗಂಭೀರ ಆರೋಪ ಮಾಡಲಾಗಿದೆ.
ಪ್ರಾಂಶುಪಾಲರಿಗೆ ನಿಗದಿತ ದಾಖಲೆಗಳೊಂದಿಗೆ ಜಂಟಿ ನಿರ್ದೇಶಕರ ಕಚೇರಿಗೆ ಹಾಜರಾಗುವಂತೆ ತಿಳಿಸಿದರೂ ಪ್ರಾಂಶುಪಾಲರು ಹಾಜರಾಗಲು ನಿರಾಕರಿಸಿದ್ದಾರೆ ಎಂದೂ ಜಂಟಿ ನಿರ್ದೇಶಕರು ಇನ್ನೊಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಇದಲ್ಲದೆ ಪ್ರಾಂಶುಪಾಲರ ಮೇಲೆ ಏಕೆ ಶಿಸ್ತು ಕ್ರಮ ಕೈಗೊಳ್ಳಬಾರದು ಎಂದು ನೋಟೀಸ್ ನೀಡಿರುವ ಪತ್ರವೂ ಮಾಹಿತಿ ಹಕ್ಕಿನಡಿ ಲಭ್ಯವಾಗಿದೆ.
ಏತನ್ಮಧ್ಯೆ ಕಾಲೇಜಿನ ಭವಿಷ್ಯ ಮತ್ತು ವಿದ್ಯಾರ್ಥಿಗಳ ಭವಿಷ್ಯದ ಕಾರಣದಿಂದ ತಕ್ಷಣವೇ ಜಂಟಿ ನಿರ್ದೇಶಕರ ಶಿಫಾರಸು ಅನುಷ್ಠಾನ ಮಾಡಬೇಕು ಎಂದು ವಿದ್ಯಾಸಂಸ್ಥೆಯ ಸ್ಥಾಪಕರಲ್ಲೊಬ್ಬರಾದ ರವಿದಾಸ ಪೈ ಆಗ್ರಹಿಸಿದ್ದಾರೆ.



