ಚಿತ್ರ ಮಂದಿರದಲ್ಲಿಕಾಲ್ತುಳಿತ; ಅಲ್ಲು ಅರ್ಜುನ್ ಗೆ ಬೆಳಗ್ಗೆ ಜೈಲು , ಸಂಜೆ ಬೇಲು

ಹೈದರಾಬಾದ್: ಡಿಸೆಂಬರ್ ೪ ರಂದು ನಡೆದ ಕಾಲ್ತುಳಿತ ದುರ್ಘಟನೆಯ ಬಗ್ಗೆ ಮೃತಪಟ್ಟ ಮಹಿಳೆಯ ಗಂಡ ನೀಡಿದ ದೂರಿನ ಅನ್ವಯ ಶುಕ್ರವಾರ ಬೆಳಗ್ಗೆ ಹೈದ್ರಾಬಾದ್ ಪೊಲೀಸರು ತೆಲುಗು ಚಿತ್ರ ನಟ ಅಲ್ಲು ಅರ್ಜುನ್ ರವರನ್ನು ಬಂಧಿಸಿದೆ. ಬಳಿಕ ಸಂಜೆಯ ಹೊತ್ತಿಗೆ ಜಾಮೀನು ನೀಡಲು ಹೈಕೋರ್ಟ್ ಸೂಚಿಸಿದೆ.
ಅಲ್ಲು ಅರ್ಜುನ್ ನಟನೆಯ ಪುಷ್ಪ ೨ ಚಿತ್ರ ಭಾರಿ ಸದ್ದು ಮಾಡುತ್ತಿದೆ. ಡಿಸೆಂಬರ್ ೪ರಂದು ಚಿತ್ರ ಬಿಡುಗಡೆಯ ದಿನ ಹೈದ್ರಾಬಾದ್ ನ ಸಂಧ್ಯಾ ಚಿತ್ರ ಮಂದಿರ ಬಳಿ ಭಾರಿ ಸಂಖ್ಯೆಯ ಜನ ಲಗ್ಗೆ ಇಟ್ಟಿದ್ದರು. ಅದೇ ದಿನ ಅಲ್ಲು ಅರ್ಜುನ್ ಕೂಡ ಚಿತ್ರ ನೋಡಲು ಬಂದಿದ್ದಾರೆ. ಈ ವೇಳೆ ಜನರನ್ನು ನಿಯಂತ್ರಣಕ್ಕೆ ತರಲು ಪೊಲೀಸರು ಲಾಠಿ ಚಾರ್ಜ್ ಮಾಡಿದ್ದಾರೆ. ಘಟನೆಯಲ್ಲಿ ಓರ್ವ ಯುವತಿ ಮತ್ತು ಆಕೆಯ ಮಗ ಕಾಲ್ತುಳಿತಕ್ಕೀಡಾಗಿದ್ದಾರೆ. ಘಟನೆಯಲ್ಲಿ ತೀವ್ರ ಗಾಯಗೊಂಡಿದ್ದ ಮಹಿಳೆ ಮೃತಪಟ್ಟಿದ್ದಾರೆ. ಈ ಸಂಬಂಧ ನಟನ ವಿರುದ್ಧ ಎಫ್. ಐ. ಆರ್ ದಾಖಲಿಸಲಾಗಿತ್ತು. ನಟನನ್ನು ಚಿಕ್ಕಡ್ ಪಳ್ಳಿ ಪೊಲೀಸ್ ಠಾಣೆಗೆ ಕರೆದೊಯ್ದಿದ್ದು, ಈ ವೇಳೆ ಅಲ್ಲು ಅರ್ಜುನ್ ತಂದೆ ಅಲ್ಲು ಅರವಿಂದ್, ಪ್ರೊಡ್ಯೂಸರ್ ದಿಲ್ ರಾಜು, ಹಾಗೂ ಇತರೆ ಸಂಬಂಧಿಗಳು ಠಾಣೆಗೆ ಧಾವಿಸಿದ್ದಾರೆ. ನಟನನ್ನು ಸಂಜೆ ೩. ೩೦ ರ ವೇಳೆಗೆ ಸ್ಥಳೀಯ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ. ನ್ಯಾಯಾಲಯ ಇವರನ್ನು ೧೪ ದಿನಗಳ ನ್ಯಾಯಾಂಗ ಬಂಧನದ ಆದೇಶ ಹೊರಡಿಸಿತ್ತು. ಹೀಗಾಗಿ ಅಲ್ಲು ಅವರನ್ನು ಚಂಚಲ್ ಗುಡ ಸೆಂಟ್ರಲ್ ಜೈಲಿಗೆ ಹಾಕಲಾಗಿತ್ತು. ಆದರೆ ತೆಲಂಗಾಣ ಹೈ ಕೋರ್ಟ್ ಮಧ್ಯ ಪ್ರವೇಶಿಸಿ ನಾಲ್ಕು ವಾರಗಳ ಜಾಮೀನು ನೀಡುವಂತೆ ಆದೇಶಿಸಿದೆ. ಆದರೆ ಅದಾಗಲೇ ರಾತ್ರಿಯಾದ್ದರಿಂದ ಶನಿವಾರ ಬೆಳಗ್ಗೆ ಅಲ್ಲೂ ಅರ್ಜುನ್ ರವರನ್ನು ಬಿಡುಗಡೆಗೊಳಿಸಲಾಗಿದೆ.



