ಹುಣಸೂರು: ಹನಗೋಡು ಹೋಬಳಿ ವ್ಯಾಪ್ತಿಯ ಮಂಗಳೂರು ಮಾಳ ಮತ್ತು ಬಿಜಾಪುರ ಕಾಲೋನಿಗೆ ಜಿ.ಪಂ. ಸಿ ಇ ಓ ಗಾಯಿತ್ರಿ ಭೇಟಿ ಜನರ ಸಮಸ್ಯೆಗಳನ್ನು ಆಲಿಸಿ , ಕೂಡಲೇ ಬಗೆಹರಿಸಲು ಸಂಬಂದಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಬುಧವಾರದಂದು ಮಂಗಳೂರು ಮಾಳ ಮತ್ತು ಬಿಜಾಪುರ ಕಾಲೋನಿಗೆ ಭೇಟಿ ನೀಡಿ ಅಲ್ಲಿನ ಸ್ಥಳೀಯರೊಂದಿಗೆ ಚರ್ಚಿಸಿ ಅವರ ಸಮಸ್ಯೆಗಳನ್ನು ಆಲಿಸಿದರು.
ಗ್ರಾಮದಲ್ಲಿ ಮ-ನರೇಗಾದಿಂದ ಚರಂಡಿ ವ್ಯವಸ್ಥೆ, ಮಕ್ಕಳ ಲಾಲನೆ ಪಾಲನೆಗೆ ಅವಶ್ಯಕ ಅಂಗನವಾಡಿ ಕಟ್ಟಡ ಕಾಮಗಾರಿ ಅರ್ಧಕ್ಕೆ ನಿಂತಿದ್ದು, ಮಕ್ಕಳ ಕಲಿಕೆಗೆ ಅಡಚಣೆಯಾಗುತ್ತಿರುವುದನ್ನು ಮನಗಂಡು ಗ್ರಾಮದ ಸರ್ಕಾರಿ ಶಾಲೆಯ ಒಂದು ಕೊಠಡಿಯಲ್ಲಿ ಅಂಗನವಾಡಿ ಕಟ್ಟಡ ಕಾಮಗಾರಿ ಪೂರ್ಣಗೊಳ್ಳುವವರೆಗೆ ಅಂಗನವಾಡಿ ನಡೆಸಲು ಸ್ಥಳಾವಕಾಶ ಮಾಡಿಕೊಡಲುಮುಖ್ಯೋಪಾಧ್ಯಾರಿಗೆ ಸೂಚಿಸಿದರು.

ಗ್ರಾಮದಲ್ಲಿ ಕೈಗೊಂಡಿರುವ ಜೆಜೆಎಂ ಕಾಮಗಾರಿಯಡಿ ಮನೆಗಳಿಗೆ ಒದಗಿಸಿರುವ ನೀರಿನ ಸಂಪರ್ಕ ವ್ಯವಸ್ಥೆಯನ್ನು ಪರಿಶೀಲಿಸುವುದರೊಂದಿಗೆ ಮಳೆಗಾಲದಲ್ಲಿ ಗ್ರಾಮಕ್ಕೆ ಹತ್ತಿರದಲ್ಲಿರುವ ಕೆರೆಯ ನೀರು ಶಾಲಾ ಆವರಣದೊಳಗೆ ನುಗ್ಗುವುದರಿಂದಾಗುವ ಅನಾಹುತದ ಬಗ್ಗೆ ತಿಳಿದು, ನರೇಗಾ ಯೋಜನೆಯಡಿ ಸೂಕ್ತ ಚರಂಡಿ ವ್ಯವಸ್ಥೆ ಕಲ್ಪಿಸುವಂತೆ ಹಾಗೂ ಶಾಲಾ ಆವರಣದಲ್ಲಿ ಆಟದ ಮೈದಾನ ನಿರ್ಮಾಣ ಮಾಡುವಂತೆ ತಿಳಿಸಿದರು.
ಈ ವೇಳೆ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಕೆ.ಹೊಂಗಯ್ಯ, ಪಿ.ಆರ್.ಇ.ಡಿ ಎಇಇ ಪುಟ್ಟ ನಾಗರಾಜು, ತಾಲ್ಲೂಕು ಯೋಜನಾಧಿಕಾರಿ ರಾಜೇಶ್, ನರೇಗಾ ಸಹಾಯಕ ನಿರ್ದೇಶಕ ಗಿರಿಧರ್ ಸೇರಿದಂತೆ ಗ್ರಾ.ಪಂ. ಅಧ್ಯಕ್ಷರು, ಪಿಡಿಒ, ಸೇರಿದಂತೆ ತಾಲ್ಲೂಕು ಮಟ್ಟದ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು
ಇದ್ದರು.



