ಖಾಸಗಿ ಬಸ್ ಡಿಕ್ಕಿ ಹೊಡೆದು ರಸ್ತೆ ದಾಟುತ್ತಿದ್ದ ವ್ಯಕ್ತಿ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ತಾಲೂಕಿನ ಕುಪ್ಪೆ ಗ್ರಾಮದಲ್ಲಿ ಡಿ. 18ರ ಬುಧವಾರ ನಡೆದಿದೆ.

ತಾಲೂಕಿನ ಕುಪ್ಪೆ ಗ್ರಾಮದ ವೆಂಕಟೇಗೌಡರ ಪುತ್ರ ಮಂಜುನಾಥ್ (48) ಸಾವನ್ನಪ್ಪಿದವರು. ಇವರು ಪತ್ನಿ, ಇಬ್ಬರು ಮಕ್ಕಳನ್ನು ಅಗಲಿದ್ದಾರೆ.
ಜಮೀನಿಗೆ ತೆರಳಿ ವಾಪಸ್ಸಾಗುತ್ತಿದ್ದ ವೇಳೆ ಮೈಸೂರು-ಬಂಟ್ವಾಳ ಹೆದ್ದಾರಿಯ ಕುಪ್ಪೆ ಬಳಿ ರಸ್ತೆ ದಾಟುತ್ತಿದ್ದ ವೇಳೆ ಮೈಸೂರು ಕಡೆಯಿಂದ ವೇಗವಾಗಿ ಬಂದ ತಮಿಳುನಾಡಿನ ಖಾಸಗಿ ಬಸ್ ಡಿಕ್ಕಿ ಹೊಡೆದ ರಭಸಕ್ಕೆ ತೀವ್ರಗಾಯಗೊಂಡು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಸ್ಥಳಕ್ಕೆ ಇನ್ಸ್ ಪೆಕ್ಟರ್ ಲೋಲಾಕ್ಷಿ ಭೇಟಿ ನೀಡಿ ಪರಿಶೀಲಿಸಿದರು. ಈ ಸಂಬಂಧ ಬಿಳಿಕೆರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



