ಮಂಗಳೂರು: ಯಕ್ಷಗಾನಕ್ಕೆ ಜಾಗತಿಕ ಮನ್ನಣೆ ದೊರಕಿಸಿಕೊಟ್ಟ ಹಾಗು ಕಲಾವಿದರ ಕಾಮಧೇನು ಎಂದು ಸ್ಥಳಿಯವಾಗಿ ಜನಮನ್ನಣೆ ಪಡೆದಿರುವ ಭಾಗವತ ಸತೀಶ್ ಶೆಟ್ಟಿ ಅವರ ಯಕ್ಷಧ್ರುವ ಪಟ್ಲ ಫೌಂಡೇಶನ್ನಿನ ದಶಮಾನೋತ್ಸವವನ್ನು ಅಭೂತಪೂರ್ವ ರೀತಿಯಲ್ಲಿ ಆಚರಿಸಬೇಕು ಎಂದು ಕರಾವಳಿಯಲ್ಲಿ ದಾನ ಪರಂಪರೆಗೆ ತಮ್ಮ ದಾನಕಾರ್ಯಗಳ ಮೂಲಕ ಹೊಸ ವ್ಯಾಖ್ಯಾನ ರೂಪಿಸಿದ ಕನ್ಯಾನ ಸದಾಶಿವ ಶೆಟ್ಟಿ ಮತ್ತು ಡಾ. ಕೆ. ಪ್ರಕಾಶ್ ಶೆಟ್ಟಿ ಸಲಹೆ ಮಾಡಿದ್ದಾರೆ.

ಮಂಗಳೂರಿನಲ್ಲಿ ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ನ ದಶಮಾನೋತ್ಸವದ ಕುರಿತು ನಡೆದ ಸಮಾಲೋಚನಾ ಸಭೆಯಲ್ಲಿ ಪಾಲ್ಗೊಂಡು ಈ ಸಲಹೆ ನೀಡಿದ ಕನ್ಯಾನ ಸದಾಶಿವ ಶೆಟ್ಟಿ ಮತ್ತು ಡಾ. ಕೆ. ಪ್ರಕಾಶ್ ಶೆಟ್ಟಿ ಅವರು ಯಕ್ಷಗಾನವನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ದ ಪಟ್ಲ ಪ್ರತಿಷ್ಠಾನದ ದಶಮಾನೋತ್ಸವ ಚಿರಸ್ಮರಣಿಯವಾಗಿಸಬೇಕು ಎಂದಾಗ ಸಭೆಯು ಕರತಾಡನ ಮೂಲಕ ಬೆಂಬಲ ವ್ಯಕ್ತಪಡಿಸಿತು.
ಟ್ರಸ್ಟ್ ನ ಮಹಾದಾನಿ, ಮುಂಬೈನ ಹೇರಂಭ ಇಂಡಸ್ಟ್ರಿಸ್ ಹಾಗು ಕೆಮಿನೋ ಫಾರ್ಮಾ ಲಿಮಿಟೆಡ್ ಅಧ್ಯಕ್ಷರೂ ಆಗಿರುವ ಕನ್ಯಾನ ಸದಾಶಿವ ಶೆಟ್ಟಿ “ನೂರಾರು ವರ್ಷಗಳ ಇತಿಹಾಸವಿರುವ ಯಕ್ಷಗಾನ ಕಲೆಯನ್ನು ಕಳೆದ 10 ವರ್ಷಗಳಲ್ಲಿ ಪಟ್ಲ ಫೌಂಡೇಶನ್ ಟ್ರಸ್ಟ್ ಜಾಗತಿಕ ವೇದಿಕೆಗೆ ಕೊಂಡೊಯ್ದು ನಾವೆಲ್ಲರೂ ಹೆಮ್ಮೆ ಪಡುವಂತೆ ಮಾಡಿದೆ. ಇದು ನಾವೆಲ್ಲ ಸಂಭ್ರಮಿಸಬೇಕಾದ ಸಂಗತಿ. ಕಲಾವಿದರ ಕಷ್ಟಗಳಿಗೆ ಸ್ಪಂದಿಸುವ ಅವರ ಚಿಂತನೆಯೂ ಅಷ್ಟೇ ಸಮಾಜಮುಖಿಯಾದುದು” ಎಂದರು. ಟ್ರಸ್ಟಿನ ಇದುವರೆಗಿನ ಸಾಧನೆ ಅಸಾಧಾರಣ ಎಂದು ಬಣ್ಣಿಸಿದ ಕನ್ಯಾನ, ದಶಮಾನೋತ್ಸವ ಕಾರ್ಯಕ್ರಮಕ್ಕೆ ಪ್ರತ್ಯೇಕ ಕಮಿಟಿ ರಚಿಸಿಕೊಂಡು ಕೆಲಸ ಮಾಡಬೇಕು ಎಂದೂ ಸಲಹೆ ಮಾಡಿದರು.
ಎಂ.ಆರ್.ಜಿ. ಗ್ರೂಫ್ ಚೇರ್ ಮೆನ್ ಡಾ.ಕೆ.ಪ್ರಕಾಶ್ ಶೆಟ್ಟಿ ಅವರು, “ಕರಾವಳಿಗೆ ಮಾತ್ರ ಸೀಮಿತವಾಗಿದ್ದ ಯಕ್ಷಗಾನದ ಕಂಪನ್ನು ಇತರ ಪ್ರದೇಶಗಳಿಗೂ ವಿಸ್ತರಿಸಿ, ಹೊಸ ತಲೆಮಾರಿನ ಪ್ರೇಕ್ಷಕರನ್ನು ಯಕ್ಷಗಾನಾಭಿಮಾನಿಗಳನ್ನಾಗಿ ರೂಪಿಸಿದ ಹೆಗ್ಗಳಿಕೆ ಪಟ್ಲರದ್ದಾಗಿದೆ. ತಮ್ಮ ಸಹೋದ್ಯೋಗಿ ಕಲಾವಿದರ ಬಗ್ಗೆ ಅವರು ತೋರುತ್ತಿರುವ ಕಾಳಜಿ ಮಾದರಿಯಾಗಿದೆ” ಎಂದರು.
ಯಕ್ಷಗಾನ ಕಲಾವಿದರಿಗೆ ಸದಾ ಬೆಂಬಲ ನೀಡುತ್ತಿರುವ ಪಟ್ಲರ ಕಾರ್ಯಕ್ರಮಕ್ಕೆ ನಾವೆಲ್ಲರೂ ಸಹಾಯ ಸಹಕಾರ ನೀಡಬೇಕು. ಜೂನ್ 1ರಂದು ನಡೆಯಲಿರುವ ದಶಮಾನೋತ್ಸವ ಕಾರ್ಯಕ್ರಮದ ಯಶಸ್ಸಿಗೆ ಒಗ್ಗೂಡಿ ದುಡಿಯಬೇಕು“ ಎಂದೂ ಪ್ರಕಾಶ್ ಶೆಟ್ಟಿ ಹೇಳಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಟ್ರಸ್ಟ್ ಪ್ರಧಾನ ಸಂಚಾಲಕ ಹಾಗು ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ, “ಪಟ್ಲ ಫೌಂಡೇಶನ್ ನ ಕಳೆದ 9 ವರ್ಷಗಳ ಕಾರ್ಯಕ್ರಮಗಳಲ್ಲಿ ನಾನು ಪಾಲ್ಗೊಂಡಿದ್ದೇನೆ. ಕೇವಲ ಯಕ್ಷಗಾನ ಕಲಾವಿದರ ಹಿತರಕ್ಷಣೆಗಾಗಿ ಪ್ರಾರಂಭವಾಗಿದ್ದ ಈ ಸಂಘಟನೆಯು ಇಂದು ಸಮಾಜದ ಎಲ್ಲ ವರ್ಗದ ಜನರ ಕಣ್ಣೀರು ಒರೆಸುವಲ್ಲಿ ಯಶಸ್ವಿಯಾಗಿದೆ. ಟ್ರಸ್ಟ್ ದಶಮಾನೋತ್ಸವ ಕಾರ್ಯಕ್ರಮ ವಿಭಿನ್ನ ರೀತಿಯಲ್ಲಿ ನಡೆಯಬೇಕು. ಜನಮಾನಸದಲ್ಲಿ ಮರೆಯದ ರೀತಿಯಲ್ಲಿ ಸಮಾಜಮುಖಿ ಕಾರ್ಯಕ್ರಮ ಹಮ್ಮಿಕೊಳ್ಳುವ ಮೂಲಕ ಅರ್ಥಪೂರ್ಣವಾಗಿಸಬೇಕು“ ಎಂದರು.
ಟ್ರಸ್ಟ್ ನ ಪ್ರಧಾನ ಸಂಚಾಲಕ ಶಶಿಧರ್ ಶೆಟ್ಟಿ ಬರೋಡ ಮಾತಾಡಿ, “ಪಟ್ಲ ಸತೀಶ್ ಶೆಟ್ಟಿಯವರು ಬಹಳಷ್ಟು ಕಷ್ಟಪಟ್ಟು ಯಕ್ಷಗಾನ ಕಲಾವಿದರಿಗಾಗಿ ಸಂಘಟನೆ ಕಟ್ಟಿದ್ದು ಅದೀಗ ದಶಮಾನೋತ್ಸವದ ಸಂಭ್ರಮದಲ್ಲಿದೆ. ಈ ಬಾರಿ ದಾನಿಗಳ ನೆರವಿನಿಂದ 10 ಕೋಟಿ ರೂ. ಒಟ್ಟುಮಾಡಿ ಅದನ್ನು ಠೇವಣಿ ಇಟ್ಟು ಅದರಿಂದ ಬರುವ ಬಡ್ಡಿಯಲ್ಲಿ ಪ್ರತೀವರ್ಷ ಕಲಾವಿದರ ಅಭ್ಯುದಯಕ್ಕಾಗಿ ಕಾರ್ಯಕ್ರಮ ಆಯೋಜಿಸುವಂತಾಗಬೇಕು. ಇದಕ್ಕಾಗಿ ದಾನಿಗಳು ಒಂದೇ ಮನಸ್ಸಿನಿಂದ ಕೆಲಸ ಮಾಡಬೇಕು ಎಂದರು. ಇದೇ ಸಂದರ್ಭ ಅವರು ಟ್ರಸ್ಟ್ ದಶಮಾನೋತ್ಸವಕ್ಕೆ ಒಂದು ಕೋಟಿ ರೂಪಾಯಿ ದೇಣಿಗೆ ಪ್ರಕಟಿಸಿದರು.
ಯಕ್ಷಧ್ರುವ ಪಟ್ಲ ಫೌಂಡೇಶನ್ ಸಂಸ್ಥಾಪಕ ಪಟ್ಲ ಸತೀಶ್ ಶೆಟ್ಟಿ ಮಾತನಾಡಿ, “ದಾನಿಗಳು ನೀಡಿರುವ ಸಹಕಾರದಿಂದ ಟ್ರಸ್ಟ್ ಯಶಸ್ವಿಯಾಗಿ ನಡೆಯುತ್ತಿದೆ. ಪಟ್ಲ ಟ್ರಸ್ಟ್ ನ ಯಕ್ಷ ಶಿಕ್ಷಣ ಅಭಿಯಾನದಡಿಯಲ್ಲಿ 6 ಜಿಲ್ಲೆಗಳ ಮಕ್ಕಳಿಗೆ ಕಳೆದ 4 ವರ್ಷಗಳಲ್ಲಿ ಸುಮಾರು 9000 ಮಕ್ಕಳಿಗೆ ಯಕ್ಷ ಶಿಕ್ಷಣ ನೀಡುತ್ತಿದೆ. ಇದೇ ತಿಂಗಳ 31ರಂದು 21 ಶಾಲೆಗಳ ಒಟ್ಟು 929 ಮಕ್ಕಳು ಬೆಳಗ್ಗೆ 9 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಒಡ್ಡೂರು ಫಾರ್ಮ್ ನಲ್ಲಿ ಯಕ್ಷಗಾನ ರಂಗಪ್ರವೇಶ ಮಾಡಲಿದ್ದಾರೆ. ಮಂಗಳೂರು ಉತ್ತರ ಕ್ಷೇತ್ರದ ಶಾಸಕ ಡಾ.ಭರತ್ ಶೆಟ್ಟಿ ವೈ. ಹಾಗೂ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಈ ಕಾರ್ಯಕ್ರಮದ ನೇತೃತ್ವವನ್ನು ವಹಿಸಲಿದ್ದಾರೆ“ ಎಂದರು.
ಪುರುಷೋತ್ತಮ ಭಂಡಾರಿ ಮಾತನಾಡಿ, “ಪಟ್ಲ ಫೌಂಡೇಶನ್ 9 ವರ್ಷಗಳಲ್ಲಿ ಟ್ರಸ್ಟ್ 15 ಕೋಟಿ ರೂ.ನಷ್ಟು ಹಣವನ್ನು ಕಲ್ಯಾಣ ಕಾರ್ಯಕ್ರಮಗಳಿಗೆ ವಿನಿಯೋಗ ಮಾಡಿದೆ. ಕನ್ಯಾನ ಸದಾಶಿವ ಶೆಟ್ಟಿಯವರು ಟ್ರಸ್ಟ್ ಗೌರವ ಅಧ್ಯಕ್ಷತೆಯನ್ನು ವಹಿಸಿಕೊಂಡ ಬಳಿಕ ದೇಶ ವಿದೇಶಗಳಲ್ಲಿ ಟ್ರಸ್ಟ್ ವಿಸ್ತರಿಸಿದೆ. ಶೀಘ್ರದಲ್ಲೇ ಕೆನಡಾ ಘಟಕ ಆರಂಭಗೊಳ್ಳಲಿದೆ“ ಎಂದರು.
ತೋನ್ಸೆ ಅನಂದ ಶೆಟ್ಟಿ ಮಾತನಾಡಿ ನಮ್ಮ ಮುಂದಿನ ಪೀಳಿಗೆಗೆ ಭೀಷ್ಮ ಯಾರು, ಯುದಿಷ್ಠಿರ ಸಾರಿದ ಸಂದೇಶ ಯಾವುದು, ಶ್ರೀಕೃಷ್ಣ ಏನನ್ನು ಬೋಧಿಸಿದ, ಬದುಕಿನಲ್ಲಿ ಏನೇನು ಸಂಭವಿಸಬಹುದು ಎಂಬುದನ್ನು ತಿಳಿಸುವುದೇ ಯಕ್ಷಗಾನ. ಇದನ್ನು ಪ್ರಚುರಪಡಿಸುವ ಮೂಲಕ ಪಟ್ಲ ಸತೀಶ ಶೆಟ್ಟಿ ಅವರು ಪರಂಪರೆ ಮತ್ತು ಸಂಸ್ಕೃತಿಯನ್ನು
ಮುಂದಿನ ತಲೆಮಾರಿಗೆ ದಾಟಿಸುತ್ತಿದ್ದಾರೆ ಎಂದರು.
ವೇದಿಕೆಯಲ್ಲಿ ವಿಕೆ ಸಮೂಹ ಸಂಸ್ಥೆಗಳ ಸ್ಥಾಪಕ ಉದ್ಯಮಿ ಮಧ್ಯಗುತ್ತು ಕರುಣಾಕರ ಎಂ ಶೆಟ್ಟಿ, ಬಿಲ್ಲಾಡಿ ಅಶೋಕ್ ಶೆಟ್ಟಿ, ಪೂನಾ ಬಂಟರ ಸಂಘದ ಅಧ್ಯಕ್ಷ ಸಂತೋಷ್ ಶೆಟ್ಟಿ, ಮುಂಬೈ ಹೋಟೆಲ್ ಉದ್ಯಮಿ ಕರ್ನಿರೆ ವಿಶ್ವನಾಥ್ ಶೆಟ್ಟಿ, ಸೀತಾರಾಮ್ ರೈ ಸವಣೂರು, ಪಟ್ಲ ಫೌಂಡೇಶನ್ ಟ್ರಸ್ಟ್ ನ ಕೋಶಾಧಿಕಾರಿ ಸಿಎ ಸುದೇಶ್ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.



