ಉಳ್ಳಾಲ: ಡೆಕೋರೇಟರ್ಸ್ ಸಂಸ್ಥೆಯಲ್ಲಿ ಕಾರ್ಮಿಕರಾಗಿ ಕಾರ್ಯನಿರ್ವಹಿಸುತ್ತಿದ್ದ 9 ಮಂದಿಗೆ ಮಾಸ್ಕ್ ಧರಿಸಿದ ತಂಡ ಗಂಭೀರವಾಗಿ ಹಲ್ಲೆ ನಡೆಸಿರುವ ಘಟನೆ ಕೋಟೆಕಾರು ಮಡ್ಯಾರ್ ಎಂಬಲ್ಲಿ ನಿನ್ನೆ ರಾತ್ರಿ ೮ ಗಂಟೆ ಸುಮಾರಿಗೆ ಸಂಭವಿಸಿದೆ.

ಹೊರರಾಜ್ಯದ ಕಾರ್ಮಿಕರಿಗೆ ಗಂಭೀರ ಹಲ್ಲೆ ನಡೆಸಲಾಗಿದ್ದು, ೭ ಮಂದಿ ದೇರಳಕಟ್ಟೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನೋವಾ ಕಾರಿನಲ್ಲಿ ಬಂದ ೬ ಮಂದಿಯ ತಂಡ ಮಾಸ್ಕ್ ಧರಿಸಿ ಕೃತ್ಯವನ್ನು ಎಸಗಿದೆ.

ಆರೋಪಿಗಳು ಮರದ ಸೋಂಟೆಯಿಂದ ಕಾರ್ಮಿಕರೆಲ್ಲರಿಗೂ ಹಲ್ಲೆ ನಡೆಸಿದ ಪರಿಣಾಮ ೭ ಮಂದಿಯಲ್ಲಿ ಹಲವರ ಕಾಲು ಮುರಿತಕ್ಕೆ ಒಳಗಾಗಿದೆ. ಮಂಗಳೂರಿನ ಬಂಟ್ಸ್ ಹಾಸ್ಟೆಲ್ ನಲ್ಲಿರುವ ಐರಿಸ್ ಡೆಕೊರೇಟರ್ಸ್ ಸಂಸ್ಥೆಯಿಂದ ೯ ಮಂದಿ ಕಾರ್ಮಿಕರು ಕೆಲ ತಿಂಗಳುಗಳ ಹಿಂದೆ ಕೆಲಸ ತ್ಯಜಿಸಿ ಮಡ್ಯಾರಿನಲ್ಲಿರುವ ಚಂದನ್ ಡೆಕೋರೇಟರ್ಸ್ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಇದೇ ದ್ವೇಷದಲ್ಲಿ ಹಲ್ಲೆ ನಡೆಸಲಾಗಿದೆ ಎಂದು ಗಾಯಾಳು ಕಾರ್ಮಿಕರು ಆರೋಪಿಸಿದ್ದಾರೆ. ಘಟನೆ ಕುರಿತ ವೀಡಿಯೋ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಆರೋಪಿಗಳೆಲ್ಲರೂ ಉಳ್ಳಾಲ ಪೊಲೀಸ್ ಠಾಣೆಗೆ ಶರಣಾಗಿರುವುದಾಗಿ ತಿಳಿದುಬಂದಿದೆ.



