ತೋಟದ ಮನೆಯಲ್ಲಿ ವೃದ್ದ ದಂಪತಿ ಕೊಲೆ

ಹುಣಸೂರು : ಹಾಡು ಹಗಲೇ ಖಾರ ಆಡಿಸುವ ಕಲ್ಲಿನಿಂದ ಜಜ್ಜಿ ವೃದ್ದ ದಂಪತಿಯನ್ನು ಕೊಲೆ ಮಾಡಿರುವ ಘಟನೆ ಹುಣಸೂರು ತಾಲೂಕಿನ ನಾಡಪ್ಪನಹಳ್ಳಿಯಲ್ಲಿ ನಡೆದಿದೆ.
ಹುಣಸೂರು ತಾಲ್ಲೂಕಿನ ಬಿಳಿಕೆರೆ ಹೋಬಳಿಯ ನಾಡಪ್ಪನಹಳ್ಳಿ ಗ್ರಾಮದ ರಂಗಸ್ವಾಮಿಗೌಡ ಹಾಗೂ ಇವರ ಪತ್ನಿ ಶಾಂತಮ್ಮ ಮೃತಪಟ್ಟಿದ್ದಾರೆ. ಮೃತ ದಂಪತಿಗೆ ಗ್ರಾ.ಪಂ.ಸದಸ್ಯ ದೇವರಾಜ್ ಸೇರಿದಂತೆ ಇಬ್ಬರು ಗಂಡು ಮಕ್ಕಳಿದ್ದು, ಒಬ್ಬಳು ಮಗಳಿದ್ದಾಳೆ. ತೋಟದ ಮನೆಯಲ್ಲಿ ವಾಸವಿರುವ ರಂಗಸ್ವಾಮಿಗೌಡ ಮತ್ತವರ ಪತ್ನಿಯನ್ನು ಯಾವ ಕಾರಣಕ್ಕೆ ಕೊಲೆ ಮಾಡಿದ್ದಾರೆಂಬುದು ತಿಳಿದು ಬಂದಿಲ್ಲ. ಪುತ್ರ ದೇವರಾಜ್ ಜಮೀನಿನಲ್ಲಿ ಶುಂಠಿ ಕೀಳುತ್ತಿದ್ದ ವೇಳೆ ಶುಂಠಿ ತುಂಬಲು ಕುಕ್ಕೆ ತರುವಂತೆ ಕಾರ್ಮಿಕ ಗಣೇಶನನ್ನು ತಂದೆಯ ತೋಟದ ಮನೆಗೆ ಕಳುಹಿಸಿದ ವೇಳೆ ಮನೆಯೊಳಗೆ ಶಾಂತಮ್ಮ ಹಾಗೂ ರಂಗಸ್ವಾಮಿಗೌಡ ದನದ ಕೊಟ್ಟಿಗೆಯಲ್ಲಿ ರಕ್ತದ ಮಡುವಿನಲ್ಲಿ ಬಿದ್ದಿರುವುದು ಪತ್ತೆಯಾಗಿದ್ದು. ತಕ್ಷಣವೇ ದೇವರಾಜ್‍ಗೆ ಮಾಹಿತಿ ನೀಡಿದ್ದಾರೆ. ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.



