ತಾಲೂಕಿನ ಕೋಳಕೂರ ಗ್ರಾಮದಲ್ಲಿ ಮಕ್ಕಳಿಬ್ಬರು ಮನೆ ಮುಂದಿನ ಸೆಪ್ಟಿಕ್ ಟ್ಯಾಂಕ್ ನಲ್ಲಿ ಬಿದ್ದು ಮೃತಪಟ್ಟ ಘಟನೆ ನಡೆದಿದೆ. ತಿಪ್ಪಣ್ಣ ಜಡಿ ಅವರ ಮಗ ಗಿರೀಶ್ (3) ಹಾಗೂ ಅವರ ಸಹೋದರಿ ಐಶ್ವರ್ಯ ಹೇರೂರ ಅವರ ಒಂದೂವರೆ ವರ್ಷದ ಮಗಳು ಶ್ರೇಷ್ಠ ಮೃತಪಟ್ಟವರು. ಬೆಳಗಿನ ಉಪಾಹಾರ ಸೇವಿಸಿದ ನಂತರ ಇವರು ಹೊರಗಡೆ ಆಡಲು ಹೋದಾಗ ಈ ಅವಘಡ ಸಂಭವಿಸಿದೆ.

ಅರ್ಧ ಗಂಟೆ ಕಳೆದರೂ ಮಕ್ಕಳು ಕಾಣಿಸದಿದ್ದಾಗ ಮನೆಯವರು ಹಾಗೂ ಅಕ್ಕಪಕ್ಕದವರು ಎರಡೂವರೆ ತಾಸು ಹುಡುಕಿದ್ದಾರೆ. ಎಲ್ಲಿಯೂ ಸಿಗದ ಕಾರಣಕ್ಕೆ ಪೊಲೀಸ್ ಸಹಾಯವಾಣಿಗೆ ಕರೆ ಮಾಡಿದಾಗ ತಕ್ಷಣವೇ ಬಂದು ಮಾಹಿತಿ ಕಲೆ ಹಾಕಿದರು. ಮನೆ ಮುಂದಿನ ಟ್ಯಾಂಕ್ ಇರುವ ವಿಷಯ ತಿಳಿದು ಅದರಲ್ಲಿ ನೋಡಿದಾಗ ಮಕ್ಕಳು ಮೃತಪಟ್ಟಿದ್ದವು.
ತಿಪ್ಪಣ್ಣ ಜಡಿ ಅವರ ಸಹೋದರಿ ಐಶ್ವರ್ಯ ಎರಡನೇ ಹೆರಿಗೆಗೆ ತವರು ಮನೆಗೆ ಆಗಮಿಸಿದ್ದಳು. ಮೊದಲನೆ ಮಗಳು ಶ್ರೇಷ್ಠ ನೀರಿನ ಟ್ಯಾಂಕ್‌ನಲ್ಲಿ ಬಿದ್ದು ಮೃತಪಟ್ಟಿದ್ದಾಳೆ. ತಿಪ್ಪಣ್ಣ ಜಡಿಯವರ ಮೂರು ಮಕ್ಕಳಲ್ಲಿ ಕೊನೆಯ ಮಗ ಗಿರೀಶ್ ಮೃತಪಟ್ಟಿದ್ದಾನೆ.



