ಮಣಿಪುರದ ಇಂಫಾಲ ಪೂರ್ವ ಜಿಲ್ಲೆಯ ಎರಡು ಸ್ಥಳಗಳಲ್ಲಿ ನಿಷೇಧಿತ ಸಂಘಟನೆಯ ಇಬ್ಬರು ಉಗ್ರರನ್ನು ಬಂಧಿಸಲಾಗಿದ್ದು, ಅವರಿಂದ ಶಸ್ತ್ರಾಸ್ತ್ರಗಳು ಮತ್ತು ₹22 ಲಕ್ಷಕ್ಕೂ ಹೆಚ್ಚು ನಗದನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಭಾನುವಾರ ನಡೆಸಿದ ಶೋಧ ಕಾರ್ಯಾಚರಣೆಯಲ್ಲಿ ಇಂಫಾಲ ಪೂರ್ವ ಜಿಲ್ಲೆಯ ವಾಂಗ್ಖೈ ಪ್ರದೇಶದಲ್ಲಿ ಸುಲಿಗೆ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದ ನಿಷೇಧಿತ ಯುನೈಟೆಡ್ ನ್ಯಾಷನಲ್ ಲಿಬರೇಶನ್ ಫ್ರಂಟ್ ನ ಉಗ್ರನನ್ನು ಬಂಧಿಸಲಾಯಿತು. ಆತನಿಂದ 15 ಜೀವಂತ ಗುಂಡುಗಳು ಮತ್ತು ಒಂದು ಬೆರೆಟಾ ಪಿಸ್ತೂಲ್ ವಶಪಡಿಸಿಕೊಳ್ಳಲಾಗಿದೆ ಎಂದು ಅವರು ಹೇಳಿದ್ದಾರೆ.
ಉಗ್ರನ ಅಡಗುತಾಣದ ಮೇಲೆ ನಡೆಸಿದ ದಾಳಿಯಲ್ಲಿ ಒಂದು ಎಸ್‌ಎಂಜಿ ಕಾರ್ಬೈನ್ ಗನ್, ಒಂದು 9 ಎಂಎಂ ಪಿಸ್ತೂಲ್, ನಾಲ್ಕು ಮ್ಯಾಗಜೀನ್, ಒಂದು ಹ್ಯಾಂಡ್ ಗ್ರೆನೇಡ್, 66 ಜೀವಂತ ಗುಂಡು ಮತ್ತು ₹69,000 ನಗದು ವಶಪಡಿಸಿಕೊಂಡಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ.
ಇಂಫಾಲ ಖುಂದ್ರಕ್ಪಂ ಅವಾಂಗ್ ಲೈಕೈ ಪ್ರದೇಶದಲ್ಲಿ ಯುಎನ್‌ಎಲ್‌ಎಫ್ ಸಂಘಟನೆಯ ಮತ್ತೊಬ್ಬ ಉಗ್ರನನ್ನು ಬಂಧಿಸಲಾಯಿತು. ಆತನಿಂದ ₹21,50,000 ನಗದು ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.



