ಏಪ್ರಿಲ್ 24 ರಂದು ಮಧ್ಯಾಹ್ನ 12.17 ಕ್ಕೆ ಬೆಂಗಳೂರಿನಲ್ಲಿ ಶೂನ್ಯ ನೆರಳು ದಿನ ಅಥವಾ ಲಹೈನಾ ನೂನ್ ಎಂದು ಕರೆಯಲ್ಪಡುವ ಆಕರ್ಷಕ ಘಟನೆ ನಡೆಯಲಿದೆ. ಈ ಅಪರೂಪದ ಕ್ಷಣದಲ್ಲಿ ಸೂರ್ಯನು ನೇರವಾಗಿ ತಲೆಯ ಮೇಲೆ ಇರುತ್ತಾನೆ, ಇದರಿಂದಾಗಿ ನಿಮ್ಮ ನೆರಳು ನಿಮಗೆ ಕಾಣಲ್ಲ ಎಂದು ಭಾರತೀಯ ಖಗೋಳ ಭೌತಶಾಸ್ತ್ರ ಸಂಸ್ಥೆಯ ವಿಜ್ಞಾನಿಗಳು ದೃಢಪಡಿಸಿದ್ದಾರೆ.

IIA ನಲ್ಲಿ ವಿಜ್ಞಾನ ಸಂವಹನ, ಸಾರ್ವಜನಿಕ ಸಂಪರ್ಕ ಮತ್ತು ಶಿಕ್ಷಣ ವಿಭಾಗದ ನೇತೃತ್ವ ವಹಿಸಿರುವ ಡಾ. ನಿರುಜ್ ಮೋಹನ್ ರಾಮಾನುಜಂ, ಸೂರ್ಯನು ಆಕಾಶದಲ್ಲಿ ತನ್ನ ಅತ್ಯುನ್ನತ ಬಿಂದುವನ್ನು ತಲುಪಿದಾಗ ಈ ವಿದ್ಯಮಾನ ಸಂಭವಿಸುತ್ತದೆ. ಪರಿಣಾಮವಾಗಿ, ನೆರಳುಗಳು ನೇರವಾಗಿ ವಸ್ತುಗಳ ಕೆಳಗೆ ಬೀಳುತ್ತವೆ ಮತ್ತು ಮಾನವ ಕಣ್ಣಿಗೆ ಅಗೋಚರವಾಗಿರುತ್ತವೆ ಎಂದು ವಿವರಿಸಿದ್ದಾರೆ.
ಆಸ್ಟ್ರೋನಾಮಿಕಲ್ ಸೊಸೈಟಿ ಆಫ್ ಇಂಡಿಯಾ ಪ್ರಕಾರ, +23.5 ಮತ್ತು -23.5 ಡಿಗ್ರಿ ಅಕ್ಷಾಂಶದ ನಡುವಿನ ಎಲ್ಲಾ ಸ್ಥಳಗಳಿಗೆ ವರ್ಷಕ್ಕೆ ಎರಡು ಬಾರಿ ಶೂನ್ಯ ನೆರಳು ದಿನ ಸಂಭವಿಸುತ್ತದೆ. ಶೂನ್ಯ ನೆರಳು ದಿನವು ಬೆಂಗಳೂರಿಗೆ ಬೆಂಗಳೂರಿಗೆ ಮಾತ್ರವಲ್ಲದೆ, ಇದು ಚೆನ್ನೈ ಮತ್ತು ಮಂಗಳೂರಿನಂತಹ ಸ್ಥಳಗಳನ್ನು ಒಳಗೊಂಡಂತೆ ಸಮಭಾಜಕ ವೃತ್ತ ಮತ್ತು ಕರ್ಕಾಟಕ ವೃತ್ತದ ನಡುವೆ ಇರುವ ಎಲ್ಲಾ ನಗರಗಳಲ್ಲಿ ನಡೆಯುತ್ತದೆ. ರಾಜ್ಯದಲ್ಲಿ, ಈ ವಿದ್ಯಮಾನವು ಸಾಮಾನ್ಯವಾಗಿ ವರ್ಷಕ್ಕೆ ಎರಡು ಬಾರಿ ಸಂಭವಿಸುತ್ತದೆ.



