ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ 54 ರನ್ ಅಂತರದ ಭರ್ಜರಿ ಗೆಲುವು ಸಾಧಿಸಿದ ಐದು ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ ಐಪಿಎಲ್ 18ನೇ ಆವೃತ್ತಿಯಲ್ಲಿ ಭರ್ಜರಿ ಕಂಬ್ಯಾಕ್ ಮಾಡಿದೆ. ಜತೆಗೆ ಈ ಗೆಲುವಿನೊಂದಿಗೆ ನೂತನ ದಾಖಲೆಯೊಂದನ್ನು ನಿರ್ಮಿಸಿದೆ. ಐಪಿಎಲ್‌ನಲ್ಲಿ 150 ಪಂದ್ಯ ಗೆದ್ದ ಮೊದಲ ತಂಡ ಎಂಬ ಮೈಲಿಗಲ್ಲು ನಿರ್ಮಿಸಿದೆ. ಸಿಎಸ್‌ಕೆ (140), ಕೆಕೆಆರ್ (133) ನಂತರದ ಸ್ಥಾನದಲ್ಲಿದೆ. ಇದು ಮಾತ್ರವಲ್ಲದೆ, ಸತತ 5 ಅಥವಾ ಅದಕ್ಕಿಂತ ಹೆಚ್ಚು ಪಂದ್ಯ ಗೆದ್ದ 7ನೇ ಸೀಸನ್ ಇದಾಗಿದ್ದು, ಇದರಲ್ಲಿ 4 ಚಾಂಪಿಯನ್ ಹಾಗೂ ಒಮ್ಮೆ ರನ್ನರ್ ಅಪ್ ಆಗಿದೆ.

ವಾಂಖೆಡೆ ಕ್ರೀಡಾಂಗಣದಲ್ಲಿ ಭಾನುವಾರ ನಡೆದಿದ್ದ ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ ಮುಂಬೈ ತಂಡ ಆರಂಭಿಕ ಆಟಗಾರ ರಿಕೆಲ್‌ಟನ್ ಮತ್ತು ಸೂರ್ಯಕುಮಾರ್ ಯಾದವ್ ಅರ್ಧಶತಕದ ನೆರವಿನಿಂದ 7 ವಿಕೆಟ್‌ಗೆ 215 ರನ್‌ಗಳ ಬೃಹತ್ ಮೊತ್ತ ಪೇರಿಸಿತು.
ಪ್ರತಿಯಾಗಿ ಬ್ಯಾಟಿಂಗ್ ನಡೆಸಿದ ಲಕ್ನೋ ಸೂಪರ್ ಜೈಂಟ್ಸ್ ಉತ್ತಮ ಆರಂಭ ಪಡೆದರೂ ಆ ಬಳಿಕ ಜಸ್‌ಪ್ರೀತ್ ಬುಮ್ರಾ ಸಹಿತ ಇತರ ಬೌಲರ್‌ಗಳ ಸಂಘಟಿತ ದಾಳಿಗೆ ತ್ತತ್ತರಿಸಿ 161 ರನ್‌ಗಳಿಗೆ ಆಲ್ ಔಟ್ ಮೂಲಕ ಸೋಲನುಭವಿಸಿತು. ಗೆಲುವು ಸಾಧಿಸಿದ ಮುಂಬೈ ಅಂಕಪಟ್ಟಿಯಲ್ಲಿ ತನ್ನ ಸ್ಥಾನ ವೃದ್ಧಿಸಿಕೊಂಡು ಮೂರನೇ ಸ್ಥಾನಕ್ಕೇರಿತು.
ಮುಂಬೈ ಪರ ಘಾತಕ ಬೌಲಿಂಗ್ ದಾಳಿ ನಡೆಸಿದ ವೇಗಿ ಜಸ್‌ಪ್ರೀತ್ ಬುಮ್ರಾ 22 ಕ್ಕೆ 4 ವಿಕೆಟ್ ಕಿತ್ತು ಮಿಂಚಿದರು. ಇದೇ ವೇಳೆ ಮುಂಬೈ ಪರ ಬುಮ್ರಾ 174 ವಿಕೆಟ್‌ಗಳನ್ನು ಪೂರ್ಣಗೊಳಿಸಿದರು. ಆ ಮೂಲಕ ಮುಂಬೈ ಪರ ಅತಿ ಹೆಚ್ಚು ವಿಕೆಟ್‌ಗಳನ್ನು ಪಡೆದ ವೇಗದ ಬೌಲರ್ ಎಂಬ ಲಸಿತ್ ಮಾಲಿಂಗ(170 ) ಅವರನ್ನು ಹಿಂದಿಕ್ಕಿದರು.



