ಮಂಗಳೂರಿನ ಕುಡುಪು ಬಳಿ ಆದಿತ್ಯವಾರ ಸಂಜೆ ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆಯಾಗಿದ್ದು, ಕೊಲೆಶಂಕೆ ವ್ಯಕ್ತವಾಗಿದೆ. ಮೃತ ಯುವಕ ಉತ್ತರ ಭಾರತ ಮೂಲದವನು ಎನ್ನಲಾಗುತ್ತಿದ್ದು, ಈತನನ್ನು ಕಲ್ಲಿನಿಂದ ಜಜ್ಜಿ ಕೊಲೆಗೈಯಲಾಗಿದೆ ಎಂದು ಹೇಳಲಾಗುತ್ತಿದೆ.

ಕುಡುಪು ಕಟ್ಟೆ ಬಳಿಯಲ್ಲಿ ಗದ್ದೆಯಲ್ಲಿ ಯುವಕರ ಗುಂಪೊಂದು 6 ತಂಡಗಳ ಕ್ರಿಕೆಟ್ ಮ್ಯಾಚ್ ಆಯೋಜಿಸಿತ್ತು. ಸಂಜೆ ವೇಳೆ ಕ್ರಿಕೆಟ್ ಪಂದ್ಯಾಟ ನಡೆಯುತ್ತಿದ್ದ ಗದ್ದೆಗೆ ಈ ಯುವಕ ತೆರಳಿದ್ದು, ಯಾವುದೋ ಕಾರಣಕ್ಕೆ ಈ ಯುವಕ ಮತ್ತು ಕ್ರಿಕೆಟ್ ಆಟಗಾರರ ಮಧ್ಯೆ ಮಾತಿಗೆ ಮಾತು ಬೆಳೆದಿದೆ ಎನ್ನಲಾಗಿದೆ. ಆಕ್ರೋಶಗೊಂಡ ಯುವಕರ ತಂಡವು ಈ ಯುವಕನಿಗೆ ಹಲ್ಲೆಗೈದಿದ್ದು, ಗಂಭೀರ ಗಾಯಗೊಂಡ ಯುವಕ ಸ್ಥಳದಲ್ಲೇ ಮೃತಪಟ್ಟಿದ್ದಾನೆ ಎನ್ನಲಾಗಿದೆ. ಹತ್ಯೆಗೀಡಾದ ವ್ಯಕ್ತಿ ಕೂಲಿ ಕಾರ್ಮಿಕ ಎಂದು ಹೇಳಲಾಗುತ್ತಿದೆ.
ಇನ್ನು ಘಟನೆ ನಡೆದ ಸ್ಥಳಕ್ಕೆ ನಗರ ಉಪ ಆಯುಕ್ತ ಸಿದ್ದಾರ್ಥ್ ಗೋಯಲ್, ನಗರ ದಕ್ಷಿಣ ಉಪವಿಭಾಗ ಸಹಾಯಕ ಪೊಲೀಸ್ ಆಯುಕ್ತೆ ಧನ್ಯಾ ನಾಯಕ್, ಮಂಗಳೂರು ಗ್ರಾಮಾಂತರ ಠಾಣಾ ಇನ್‌ಸ್ಪೆಕ್ಟರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನೆಯ ಬಗ್ಗೆ ಮಂಗಳೂರು ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ.



