ಮಂಗಳೂರು: ಜಿಲ್ಲೆಯ ಖ್ಯಾತ ನಾಟಕಕಾರ, ನಟ ಪಂಡಿತ್ ಹೌಸ್ ಪಿಲಾರು ನಿವಾಸಿ ಗಿರೀಶ್ ಪಿಲಾರ್ (60) ಅಲ್ಪಕಾಲದ ಅಸೌಖ್ಯದಿಂದ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ‘ದೇವರೆ ತೀರ್ಪು’, ‘ಆರ್ ಅತ್ ಈರ್’, ‘ಕೈಕೊರ್ಪೆರ್’, ‘ಬಲಿಪಡೆ ಉಂತುಲೆ’, ‘ಎಂಕುಲತ್ ನಿಕುಲು’,’ಎಂಕುಲ್ ಎನ್ನಿಲೆಕ ಅತ್’, ಆರ್ ಅತ್ ಈರ್, ‘ಡಿಸೆಂಬರ್ -1’ ಸೇರಿದಂತೆ 20ಕ್ಕೂ ಅಧಿಕ ತುಳು ನಾಟಕಗಳನ್ನು ಬರೆದು ನಿರ್ದೇಶಿಸಿದ್ದರು. ಇವರು ಬರೆದು ನಿರ್ದೇಶಿಸಿದ ದೇವೆರೆ ತೀರ್ಪು ನಾಟಕಕ್ಕೆ ಜಿಲ್ಲಾಮಟ್ಟದ ಪ್ರಶಸ್ತಿ ಲಭಿಸಿತ್ತು. ಮಂಗಳೂರಿನ ಪುರಭವನದಲ್ಲಿ ಹಲವು ಬಾರಿ ಪ್ರದರ್ಶನಗೊಂಡಿತ್ತು. ‘ಕೈಕೊರ್ಪೆರ್’ ನಾಟಕ ಬೆಳ್ತಂಗಡಿಯ ಪೂಂಜಾಲಕಟ್ಟೆಯಲ್ಲಿ ಯಶಸ್ವಿ ಪ್ರದರ್ಶನ ಕಂಡು ಪ್ರಶಸ್ತಿಯನ್ನು ಪಡೆದುಕೊಂಡಿತ್ತು.’ಬಲಿಪಡೆ ಉಂತುಲೆ’ 40 ಪ್ರದರ್ಶನಗಳನ್ನು ಕಂಡಿತ್ತು. ಶರವು ಕಲಾವಿದರು ನಟಿಸಿದ ನವ ನೀತ್ ಶೆಟ್ಟಿ ಕದ್ರಿ ರಚಿಸಿದ ಕಾರ್ನಿಕದ ಶನೀಶ್ವರೆ ನಾಟಕವನ್ನು ಗಿರೀಶ್ ಪಿಲಾರ್ ನಿರ್ದೇಶಿಸಿ ಯಶಸ್ವಿ 30 ಪ್ರದರ್ಶನವಾಗಿತ್ತು. ದಿನೇಶ್ ಕಂಕನಾಡಿ ಇವರ ನಾಟಕ ‘ಮಾಷ್ಟ್ರದಾನೆ ಮನಿಪುಜೆರ್’ ನಾಟಕದಲ್ಲಿ ಮುಖ್ಯ ಪಾತ್ರದಲ್ಲಿ ನಟಿಸಿದ್ದರು. ಹಲವು ನಾಟಕಗಳಲ್ಲಿ ಸ್ತ್ರೀ ಪಾತ್ರಧಾರಿಯಾಗಿ ಪ್ರೇಕ್ಷಕರ ಗಮನ ಸೆಳೆದಿದ್ದರು. ಕಿರುತೆರೆಯಲ್ಲಿ ನಟಿಸಿದ್ದ ಗಿರೀಶ್ ಇವರು ನಟಿಸಿದ್ದ ಪುಂಡಿ ಪಣವು ಧಾರವಾಹಿ ದೂರದರ್ಶನ ಸೇರಿದಂತೆ ಸ್ಥಳೀಯ ವಾಹಿನಿಗಳಲ್ಲಿ ಪ್ರಸಾರವಾಗುತ್ತಿತ್ತು.



