ಪಹಲ್ಗಾಮ್ ಭಯೋತ್ಪಾದಕ ದಾಳಿಯ ಬೆನ್ನಲ್ಲೇ ಭಾರತ ಮತ್ತು ಪಾಕಿಸ್ತಾನದ ನಡುವಿನ ಉದ್ವಿಗ್ನತೆ ಹೆಚ್ಚಿರುವ ನಡುವೆಯೇ ಪಂಜಾಬ್ ಪೊಲೀಸರು ಮಂಗಳವಾರ ಐಎಸ್‌ಐ ಬೆಂಬಲಿತ ಗಡಿಯಾಚೆಗಿನ ಭಯೋತ್ಪಾದನೆಯ ವಿರುದ್ಧ ಕಾರ್ಯಾಚರಣೆ ನಡೆಸಿ ಅಪಾರ ಪ್ರಮಾಣದ ಶಸ್ತ್ರಾಸ್ತ್ರ, ಸ್ಫೋಟಕಗಳನ್ನು ಜಪ್ತಿ ಮಾಡಿದ್ದಾರೆ.

ಎಸ್‌ಬಿಎಸ್ ನಗರದ ಟಿಬ್ಬಾ ನಂಗಲ್-ಕುಲಾರ್ ರಸ್ತೆಯ ಬಳಿಯ ಅರಣ್ಯ ಪ್ರದೇಶದಲ್ಲಿ ಪಂಜಾಬ್ ಪೊಲೀಸರು ಮತ್ತು ಕೇಂದ್ರ ತನಿಖಾ ದಳದ ಸಿಬ್ಬಂದಿ ಜಂಟಿಯಾಗಿ ಕಾರ್ಯಾಚರಣೆ ನಡೆಸಿದ್ದು, ಎರಡು ರಾಕೆಟ್ ಚಾಲಿತ ಗ್ರೆನೇಡ್, ಎರಡು ಸುಧಾರಿತ ಸ್ಪೋಟಕ ಸಾಧನಗಳು, ಐದು ಪಿ-86 ಹ್ಯಾಂಡ್ ಗ್ರೆನೇಡ್‌ಗಳು, ಒಂದು ಮೊಬೈಲ್ ಅನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಪಾಕಿಸ್ತಾನನದ ಗುಪ್ತಚರ ಸಂಸ್ಥೆ ಐಎಸ್‌ಐ ಸೇರಿದಂತೆ ಭಯೋತ್ಪಾದಕ ಸಂಘಟನೆಗಳು ಪಂಜಾಬ್‌ನಲ್ಲಿ ಸೀಪರ್ ಸೆಲ್‌ಗಳನ್ನು ಪುನರುಜ್ಜಿವನಗೊಳಿಸಲು ಪ್ರಯತ್ನಿಸುತ್ತಿವೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿರುವುದಾಗಿ ಪಂಜಾಬ್ ಡಿಜಿಪಿ ಹೇಳಿದ್ದಾರೆ.



