ದೇರಳಕಟ್ಟೆಯ ಯೆನೆಪೋಯ ವೈದ್ಯಕೀಯ ಕಾಲೇಜು ಆಸ್ಪತ್ರೆಯ ಭಾಗವಾಗಿರುವ ಜುಲೇಖಾ ಯೆನೆಪೋಯ ಇನ್‌ಸ್ಟಿಟ್ಯೂಟ್ ಆಫ್ ಎಂಡೋಕ್ರೈನ್ ಮತ್ತು ಆಂಕೊಲಾಜಿಯಲ್ಲಿ ನಡೆಸಲಾದ ಥೈರಾಯ್ಡ್ ಕ್ಯಾನ್ಸರ್ ಶಸ್ತ್ರಚಿಕಿತ್ಸೆಯ ನಂತರ 7 ವರ್ಷದ ಬಾಲಕಿ ಯಶಸ್ವಿಯಾಗಿ ಚೇತರಿಸಿಕೊಂಡಿದ್ದಾರೆ. ಅತ್ಯಾಧುನಿಕ ತಂತ್ರಜ್ಞಾನ ಮತ್ತು ನುರಿತ ವೈದ್ಯರ ತಂಡದ ಸಹಾಯದಿಂದ ಈ ಸುಧಾರಿತ ವಿಧಾನವನ್ನು ನಡೆಸಲಾಗಿದೆ ಎಂದು ಆಂಕೊಲಾಜಿ ವಿಭಾಗದ ಮುಖ್ಯಸ್ಥ ಡಾ. ಜಲಾಲುದ್ದೀನ್ ಅಕ್ಬರ್ ತಿಳಿಸಿದರು.

ದೇರಳಕಟ್ಟೆ ಜುಲೇಖಾ ಯೆನೆಪೋಯ ಇನ್‌ಸ್ಟಿಟ್ಯೂಟ್‌ನಲ್ಲಿ ಬುಧವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬಾಲಕಿಯ ಕುತ್ತಿಗೆಯಲ್ಲಿ ಗುಳ್ಳೆಯನ್ನು ಗಮನಿಸಿದ ನಂತರ ಆಕೆಯ ಪೋಷಕರು ಆಸ್ಪತ್ರೆಗೆ ಕರೆತಂದಿದ್ದರು. ಪರೀಕ್ಷೆಗಳು ಇದು ಥೈರಾಯ್ಡ್‌ನ ಪ್ಯಾಪಿಲ್ಲರಿ ಕಾರ್ಸಿನೋಮ ಎಂದು ದೃಢಪಟ್ಟಿದ್ದು, ಅದು ಕುತ್ತಿಗೆಯ ಎರಡೂ ಬದಿಗಳಿಗೆ ಹರಡಿದ್ದು ನಮಗೆ ಕಂಡುಬಂದಿದೆ.
ಅತಿ ಸೂಕ್ಷ್ಮವಾದ ಪ್ರಕರಣವನ್ನು ಎದುರಿಸಿದ ಡಾ. ಎಚ್.ಟಿ. ಅಮರ್ ರಾವ್, ಡಾ. ನೂರ್ ಮೊಹಮ್ಮದ್ ಮತ್ತು ಅಂತಃಸ್ರಾವಶಾಸ್ತ್ರಜ್ಞ ಡಾ. ಪ್ರೀತಿ ಅವರ ತಂಡ ಶಸ್ತ್ರಚಿಕಿತ್ಸೆ ಮಾಡಲು ನಿರ್ಧರಿಸಿತು. ಸುಧಾರಿತ ಆಸ್ಪತ್ರೆ ಉಪಕರಣಗಳನ್ನು ಬಳಸಿಕೊಂಡು ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ಮಾಡಲಾಯಿತು. ಮಗು ಈಗ 99% ಚೇತರಿಸಿಕೊಂಡಿದೆ. ರೇಡಿಯೊಅಯೋಡಿನ್ ಚಿಕಿತ್ಸೆಯ ಅವಧಿಯ ನಂತರ ಅಂತಿಮ ಮೌಲ್ಯಮಾಪನ ಮಾಡಲಾಗುತ್ತದೆ. ಚಿಕಿತ್ಸೆಯ ನಂತರ, ಹುಡುಗಿ ಸಂಪೂರ್ಣವಾಗಿ ಸಾಮಾನ್ಯ ಜೀವನವನ್ನು ನಡೆಸುವ ನಿರೀಕ್ಷೆಯಿದೆ ಎಂದಾರು.
ಬಳಿಕ ಮಾತನಾಡಿದ ಡಾ. ನೂರ್ ಅಹಮ್ಮದ್ ಥೈರಾಯ್ಡ್ ಕ್ಯಾನ್ಸರ್‌ಗಾಗಿ ಮಕ್ಕಳ ಮೇಲೆ ಶಸ್ತ್ರಚಿಕಿತ್ಸೆ ಮಾಡುವುದು ವಯಸ್ಕರಿಗಿಂತ ಹೆಚ್ಚಿನ ಸವಾಲಾಗಿ ಪರಿಣಮಿಸುತ್ತದೆ. ಶಸ್ತ್ರ ಚಿಕಿತ್ಸೆಯಲ್ಲಿ ಕೊಂಚ ತಪ್ಪಾದರೂ ಮಗುವಿನ ಪೂರ್ತಿ ಜೀವನಕ್ಕೆ ದುಷ್ಪರಿಣಾಮ ಬೀರುವ ಅಪಾಯವಿದೆ. ಹೀಗಾಗಿ ಸುಮಾರು ೯ ಗಂಟೆಗಳ ದೀರ್ಘ ಸಮಯದ ಶಸ್ತ್ರ ಚಿಕಿತ್ಸೆ ಇದಾಗಿತ್ತು ಎಂದರು.

ಆಸ್ಪತ್ರೆಯ ಸೂಪರಿಂಟೆಂಡೆಂಟ್ ಹಬೀಬ್ ರೆಹಮಾನ್ ಮಾತನಾಡಿ, ಬಹು ವಿಭಾಗಗಳು ಮತ್ತು ಶಸ್ತ್ರಚಿಕಿತ್ಸಾ ತಂಡಗಳ ಪರಿಶ್ರಮದ ಮೂಲಕ ಥೈರಾಯ್ಡ್ ಕ್ಯಾನ್ಸರ್‌ನ ಯಶಸ್ವಿ ಚಿಕಿತ್ಸೆ ಸಾಧ್ಯವಾಯಿತು. ಆಸ್ಪತ್ರೆಯ ತಜ್ಞ ಸಿಬ್ಬಂದಿ ಮತ್ತು ಅತ್ಯಾಧುನಿಕ ಸೌಲಭ್ಯಗಳನ್ನು ಸದುಪಯೋಗ ಪಡಿಸಿದ್ದು, ಇದು ಅನೇಕ ಶಸ್ತ್ರಚಿಕಿತ್ಸೆಗಳನ್ನು ಯಶಸ್ವಿಯಾಗಿ ನಿರ್ವಹಿಸಲು ಅವರಿಗೆ ಹೊಸ ಹುರುಪು ಮಾಡಿಕೊಟ್ಟಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಡಾ. ಎಚ್.ಟಿ. ಅಮರ್ ರಾವ್, ಸಹಾಯಕ ವೈದ್ಯಕೀಯ ಸೂಪರಿಂಟೆಂಡೆಂಟ್ ಡಾ. ನಾಗರಾಜ್, ಮಕ್ಕಳ ತಜ್ಞ ಡಾ. ಅನಿತಾ ಪ್ರಭು, ನರ್ಸಿಂಗ್ ಸೂಪರಿಂಟೆಂಡೆಂಟ್ ಸತ್ಯವತಿ ದೇವಿ, ಸಹಾಯಕ ವೈದ್ಯಕೀಯ ನಿರ್ದೇಶಕಿ ಡಾ. ಬೋನಿ ಪಾಲ್ ಮತ್ತು ಮೊಹಮ್ಮದ್ ಸಬಿತ್ ಉಪಸ್ಥಿತರಿದ್ದರು.



