ಬಜ್ಪೆಯಲ್ಲಿ ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಕೊಲೆ ಪ್ರಕರಣವನ್ನು ಎನ್‌ಐಎ ತನಿಖೆಗೆ ಹಸ್ತಾಂತರಿಸುವ ನಿಟ್ಟಿನಲ್ಲಿ ಸರಕಾರಕ್ಕೆ ನಿರ್ದೇಶನ ನೀಡುವಂತೆ ಆಗ್ರಹಿಸಿ ಸಹಾಸ್ ಶೆಟ್ಟಿ ಹೆತ್ತವರು ದ.ಕ., ಉಡುಪಿ ಜಿಲ್ಲೆಯ ಬಿಜೆಪಿ ಶಾಸಕರು, ಸಂಸದರ ನಿಯೋಗದೊಂದಿಗೆ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ರವರನ್ನು ಭೇಟಿಯಾಗಿ ಮನವಿ ಸಲ್ಲಿಸಿದ್ದಾರೆ.

ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ವಿಧಾನ ಸಭಾ ವಿಪಕ್ಷ ನಾಯಕ ಆರ್. ಅಶೋಕ್, ಉಪನಾಯಕ ಅರವಿಂದ ಬೆಲ್ಲದ್, ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣ ಸ್ವಾಮಿ ಅವರು ನಿಯೋಗದ ನೇತೃತ್ವವನ್ನು ವಹಿಸಿದ್ರು. ಗುರುವಾರ ಸಂಸದರು ಹಾಗೂ ಶಾಸಕರ ನಿಯೋಗ ಮಂಗಳೂರು ಪೊಲೀಸ್ ಕಮಿಷನರ್ ಅರ್ಗವಾಲ್ ಅವರನ್ನು ಭೇಟಿ ಸುಹಾಸ್ ಕೊಲೆ ಹಿಂದಿರುವ ಕೆಲವೊಂದು ಅನುಮಾನಗಳ ಬಗ್ಗೆ ಗಮನಕ್ಕೆ ತಂದು ಸೂಕ್ತ ಕ್ರಮಕ್ಕೆ ಒತ್ತಾಯಿಸಿತ್ತು. ಈ ನಡುವೆ ಬಿಜೆಪಿ ರಾಷ್ಟ್ರೀಯಾಧ್ಯಕ್ಷ, ಕೇಂದ್ರ ಸಚಿವ ಜೆ.ಪಿ. ನಡ್ಡಾ ಅವರು ಮೇ.11ರಂದು ಸುಹಾಸ್ ಶೆಟ್ಟಿ ನಿವಾಸಕ್ಕಾಗಮಿಸಿ ಹೆತ್ತವರಿಗೆ ಸಾಂತ್ವನ ಹೇಳಲಿದ್ದಾರೆ.

ಸುಹಾಸ್ ಶೆಟ್ಟಿ ಹತ್ಯೆಗೆ ಸಂಬAಧಿಸಿ ಇದುವರೆಗೆ 8 ಮಂದಿ ಹಂತಕರನ್ನು ಬಂಧಿಸಲಾಗಿದ್ದು, ಇನ್ನಷ್ಟು ಮಂದಿ ಈ ಕೃತ್ಯ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಶಾಮೀಲಾಗಿದ್ದಾರೆಂಬ ಹಿನ್ನಲೆಯಲ್ಲಿ ಮತ್ತು ವಿದೇಶದಿಂದಲು 50 ಲಕ್ಷಕ್ಕೂ ಹೆಚ್ಚು ಹಣ ಹರಿದುಬಂದಿದೆ ಎಂಬ ಆರೋಪವಿರುವುದರಿಂದ ಪ್ರಕರಣದ ತನಿಖೆಯನ್ನು ಎನ್‌ಐಎಯಿಂದ ತನಿಖೆ ನಡೆಸಬೇಕು. ಸುಹಾಸ್ ಹೆತ್ತವರು ಹಾಗೂ ಕುಟುಂಬಸ್ಥರು ಒತ್ತಾಯಿಸುತ್ತಲೇ ಇದ್ದು ಕರ್ನಾಟಕ ಸರಕಾರ ಪ್ರಕರಣವನ್ನು ಪೊಲೀಸರಿಂದಲೇ ತನಿಖೆ ನಡೆಸಲು ಹಠಕ್ಕೆ ಬಿದ್ದಿದೆ. ಹಾಗಾಗಿ ರಾಜ್ಯಪಾಲರು ಮಧ್ಯಪ್ರವೇಶಿಸಿ ಈ ಕೃತ್ಯದ ತನಿಖೆಯನ್ನು ಎನ್‌ಐಎಗೆ ಒಪ್ಪಿಸುವ ನಿಟ್ಟಿನಲ್ಲಿ ಸರಕಾರಕ್ಕೆ ನಿರ್ದೇಶನ ನೀಡಬೇಕೆಂದು ಮನವಿ ಮೂಲಕ ಒತ್ತಾಯಿಸಲಾಗಿದೆ.



