ಐಸ್‌ಕ್ರೀಂನಲ್ಲಿ ಹಲ್ಲಿಯ ಬಾಲ ಪತ್ತೆಯಾಗಿರುವ ಆಘಾತಕಾರಿ ಘಟನೆಯೊಂದು ಗುಜರಾತ್‌ನಲ್ಲಿ ನಡೆದಿದೆ. ಅಹಮದಾಬಾದ್‌ನ ಮಣಿನಗರದಲ್ಲಿರುವ ಮಹಾಲಕ್ಷ್ಮೀ ಕಾರ್ನರ್ ಎಂಬ ಅಂಗಡಿಯಿಂದ ಮಹಿಳೆಯೊಬ್ಬರು ಮಕ್ಕಳಿಗೆ ಮತ್ತು ಅವರಿಗೆಂದು 4 ಐಸ್‌ಕ್ರೀಂ ಕೋನ್‌ಗಳನ್ನು ಖರೀದಿಸಿದ್ದರು. ಅರ್ಧ ಐಸ್‌ಕ್ರೀಂ ತಿಂದ ನಂತರ ಅವರಿಗೆ ಕೋನ್‌ನಲ್ಲಿ ಹಲ್ಲಿಯ ಬಾಲ ಕಂಡು ಬಂದಿದೆ.

ಈ ಘಟನೆ ನಡೆದ ಬಳಿಕ ಮಹಿಳೆಗೆ ತೀವ್ರ ಹೊಟ್ಟೆನೋವು ಹಾಗೂ ಅಸ್ವಸ್ಥತೆಯ ಲಕ್ಷಣಗಳು ಕಾಣಿಸಿಕೊಂಡವು. ತಕ್ಷಣವೇ ಅವರನ್ನು ಹತ್ತಿರವಿದ್ದ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ. ಅವರು ಇನ್ನೂ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ʼʼನಾವು ನಾಲ್ಕು ಕೋನ್‌ಗಳನ್ನು ತೆಗೆದುಕೊಂಡದ್ದೆವು. ಒಂದರಲ್ಲಿ ಹಲ್ಲಿಯ ಬಾಲ ಕಂಡು ಬಂದಿದೆ. ಅದನ್ನು ಸೇವಿಸಿದ ಬಳಿಕ ನನಗೆ ನಿರಂತರವಾಗಿ ವಾಂತಿ ಆಗುತ್ತಿದೆ. ದೇವರ ಕೃಪೆಯಿಂದ ನನ್ನ ಮಕ್ಕಳು ಇದನ್ನು ತಿನ್ನಲಿಲ್ಲ. ಏನಾದರೂ ಆಗಿದ್ದರೆ ಕಂಪನಿಯ ವಿರುದ್ಧ ಗಂಭೀರ ಪ್ರಕರಣ ಹಾಕುತ್ತಿದ್ದೆವು. ದಯವಿಟ್ಟು ಐಸ್‌ಕ್ರೀಂ ತಿನ್ನುವ ಮೊದಲು ಸರಿಯಾಗಿ ನೋಡಿʼʼ ಎಂದು ಮಹಿಳೆ ಹೇಳಿದ್ದಾರೆ. ಅಹಮದಾಬಾದ್ ಮಹಾನಗರ ಪಾಲಿಕೆಗೆ ದೂರು ನೀಡಿದ ಬಳಿಕ, ಆಹಾರ ಸುರಕ್ಷತಾ ಕಾಯ್ದೆಯಡಿ ಪರವಾನಗಿ ಇಲ್ಲದ ಕಾರಣದಿಂದ ಮಹಾಲಕ್ಷ್ಮಿ ಕಾರ್ನರ್ ಅಂಗಡಿಯನ್ನು ಸೀಜ್ ಮಾಡಲಾಯಿತು. ಜತೆಗೆ ಐಸ್‌ಕ್ರೀಂ ಕಂಪನಿ ಹವ್ಮೋರ್‌ಗೆ 50,000 ರೂ. ದಂಡ ವಿಧಿಸಲಾಗಿದೆ.



