ಪ್ರೊ ಕಬಡ್ಡಿ ಲೀಗ್ 12ನೇ ಆವೃತ್ತಿಯ ಆಟಗಾರರ ಹರಾಜು ಪ್ರಕ್ರಿಯೆ ಇದೇ ಮೇ 31 ಮತ್ತು ಜೂನ್ 1ರಂದು ಮುಂಬೈನಲ್ಲಿ ನಡೆಯಲಿದೆ. 12ನೇ ಆವೃತ್ತಿಗೆ ಸಿದ್ಧತೆ ನಡೆದಿದ್ದು, ಹರಾಜಿನಲ್ಲಿ ಬಲಿಷ್ಠ ಆಟಗಾರರನ್ನು ತಮ್ಮತ್ತ ಸೆಳೆಯಲು ಲೀಗ್‌ನಲ್ಲಿರುವ 12 ಫ್ರ್ಯಾಂಚೈಸಿಗಳು ಪೈಪೋಟಿ ನಡೆಸಲಿವೆ. ಕಳೆದ ಡಿಸೆಂಬರ್‌ನಲ್ಲಿ ನಡೆದ 11ನೇ ಆವೃತ್ತಿಯ ಫೈನಲ್‌ನಲ್ಲಿ ಪಟ್ನಾ ಪೈರೇಟ್ಸ್ ತಂಡವನ್ನು ಮಣಿಸಿ ಹರಿಯಾಣ ಸ್ಟೀಲರ್ಸ್ ತಂಡವು ಮೊದಲ ಬಾರಿ ಕಿರೀಟವನ್ನು ಮುಡಿಗೇರಿಸಿಕೊಂಡಿತ್ತು.

ಸುನಿಲ್ ಕುಮಾರ್ ಮತ್ತು ಅಮೀರ್ ಮೊಹಮ್ಮದ್ ಜಫರ್ದಾನೇಶ್, ಜೈದೀಪ್ ದಹಿಯಾ, ಸುರೇಂದರ್ ಗಿಲ್, ಪುಣೇರಿ ಪಲ್ಟನ್ ಜೋಡಿಯಾದ ಅಸ್ಲಾಮ್ ಇನಾಮದಾರ್ ಮತ್ತು ಮೋಹಿತ್ ಗೋಯತ್ ತಮ್ಮ ತಂಡಗಳಿಂದ ಉಳಿಸಿಕೊಂಡಿರುವ ಅಗ್ರ ಆಟಗಾರರು.
ಮೂರು ವಿಭಾಗಗಳಲ್ಲಿ ಒಟ್ಟು 83 ಆಟಗಾರರನ್ನು ಉಳಿಸಿಕೊಳ್ಳಲಾಗಿದೆ. ಎಲೈಟ್ ರಿಟೈನ್ಡ್ ಪ್ಲೇಯರ್ಸ್ (ERP) ವಿಭಾಗದಲ್ಲಿ 25, ರಿಟೈನ್ಡ್ ಯಂಗ್ ಪ್ಲೇಯರ್ಸ್ (RYP) ವಿಭಾಗದಲ್ಲಿ 23 ಮತ್ತು ನ್ಯೂ ಯಂಗ್ ಪ್ಲೇಯರ್ಸ್ (NYP) ವಿಭಾಗದಲ್ಲಿ 35 ಆಟಗಾರರಿದ್ದಾರೆ.
ಭಾರತದ ಖ್ಯಾತ ಆಟಗಾರರಾದ ಪವನ್ ಸೆಹ್ರಾವತ್, ಅರ್ಜುನ್ ದೇಶ್ವಾಲ್, ಆಶು ಮಲಿಕ್ ಮತ್ತು ಪಿಕೆಎಲ್ 11 ರ ಟಾಪ್ ರೈಡರ್ ದೇವಾಂಕ್ ದಲಾಲ್ ಸೇರಿದಂತೆ 500 ಕ್ಕೂ ಹೆಚ್ಚು ಆಟಗಾರರು ಹರಾಜಿನಲ್ಲಿ ಭಾಗವಹಿಸಲಿದ್ದಾರೆ. ಇರಾನಿನ ಫಜಲ್ ಅತ್ರಾಚಲಿ ಮತ್ತು ಮೊಹಮ್ಮದ್ರೆಜಾ ಶಾದ್ಲೌಯಿ ಹಾಗೂ ಪಿಕೆಎಲ್‌ನ ಅನುಭವಿ ಆಟಗಾರರಾದ ಮಣಿಂದರ್ ಸಿಂಗ್ ಮತ್ತು ಪರ್ದೀಪ್ ನರ್ವಾಲ್ ಕೂಡ ಪಿಕೆಎಲ್ 12 ಹರಾಜಿನಲ್ಲಿ ಭಾಗವಹಿಸಲಿದ್ದಾರೆ.
ಸ್ಟಾರ್ ರೈಡರ್ ನವೀನ್ ಕುಮಾರ್ ಮೊದಲ ಬಾರಿಗೆ ಹರಾಜಿನಲ್ಲಿ ಭಾಗವಹಿಸಲಿದ್ದಾರೆ. ಕಳೆದ ಆರು ಋತುಗಳಲ್ಲಿ ದಬಾಂಗ್ ಡೆಲ್ಲಿ ಕೆ.ಸಿ. ಪರ ನವೀನ್, 1,102 ರೈಡ್ ಪಾಯಿಂಟ್‌ಗಳನ್ನು ಗಳಿಸಿದ್ದರು. ಈ ಬಾರಿ ಹರಾಜಿಗೆ ಪ್ರವೇಶಿಸಲಿದ್ದಾರೆ. ಹರಾಜಿನಲ್ಲಿ, ದೇಶೀಯ ಮತ್ತು ವಿದೇಶಿ ಆಟಗಾರರನ್ನು ಎ, ಬಿ, ಸಿ ಮತ್ತು ಡಿ ಎಂದು ನಾಲ್ಕು ವಿಭಾಗಗಳಾಗಿ ವಿಂಗಡಿಸಲಾಗಿದೆ. ಪ್ರತಿ ಫ್ರಾಂಚೈಸಿ ತನ್ನ ತಂಡಕ್ಕೆ ಒಟ್ಟು 5 ಕೋಟಿ ವೇತನವನ್ನು ಹೊಂದಿರುತ್ತದೆ.



