ಕುಂದಾಪುರ: ರಾತ್ರಿ ಮನೆಯಲ್ಲಿ ಮಲಗಿದ್ದ ಆರು ವರ್ಷದ ಬಾಲಕಿ ನಿದ್ದೆಯ ಮಂಪರಿನಲ್ಲಿ ಎದ್ದು ಸುಮಾರು ಮೂರು ಕಿಲೋಮೀಟರ್ ನಡೆದು ಕೊರಗಜ್ಜನ ಕಟ್ಟೆಯ ನಾಮಫಲಕದ ಎದುರು ಪತ್ತೆಯಾಗಿರುವ ಘಟನೆ ಬುಧವಾರ ತಡರಾತ್ರಿ ನಡೆದಿದೆ. ಉಡುಪಿಯ ಕುಂದಾಪುರದ ಕೆದೂರು ಸಮೀಪದ ದಬ್ಬೆಕಟ್ಟೆ ಎಂಬಲ್ಲಿ ನಿನ್ನೆ ರಾತ್ರಿ 3 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ ಎನ್ನಲಾಗಿದ್ದು,ದೈವ ಕೊರಗಜ್ಜನೇ ಮಗುವನ್ನು ತಡೆದು ರಕ್ಷಿಸಿದ್ದಾರೆ ಎನ್ನಲಾಗಿದೆ. ಕುಂದಾಪುರ ತಾಲೂಕಿನ ಕೊರ್ಗಿ ಗ್ರಾಮದ ಚಾರುಕೊಟ್ಟಿಗೆ ಸಮೀಪದ ದಬ್ಬೆಕಟ್ಟೆ – ತೆಕ್ಕಟ್ಟೆ ರಸ್ತೆಯಲ್ಲಿ ಹೋಗುತ್ತಿದ್ದ ಚಾರುಕೊಟ್ಟಿಗೆ ಅರ್ಚನಾ ಬಾರ್ ನ ವಿಶ್ವನಾಥ್ ಎಂಬವರಿಗೆ ಬಾಲಕಿ ಸಿಕ್ಕಿದ ಬಳಿಕ ಆಕೆಯನ್ನು ಸುರಕ್ಷಿತವಾಗಿ ಮನೆಗೆ ತಲುಪಿಸಿದ್ದಾರೆ.
ಚಾರುಕೊಟ್ಟಿಗೆ ಅರ್ಚನಾ ಬಾರ್ ನಾ ವಿಶು (ವಿಷ್ವನಾಥ್ ಪೂಜಾರಿ) ಬುಧವಾರ ತಡರಾತ್ರಿ ಸುಮಾರು ೨ ಗಂಟೆ ಹೊತ್ತಿಗೆ ತನ್ನ ಬಾರಿನ ಎಲ್ಲಾ ಕೆಲಸಗಳನ್ನು ಮುಗಿಸಿ ಸಿಬ್ಬಂದಿಗಳೊಂದಿಗೆ ಮನೆಗೆ ಹೋಗುತ್ತಿರುವ ಸಮದಲ್ಲಿ ದಬ್ಬೆಕಟ್ಟೆ ತೆಕ್ಕಟ್ಟೆ ರೋಡಿನಲ್ಲಿ ಆರು ವರ್ಷದ ಹೆಣ್ಣು ಮಗುವೊಂದು ವಿವಸ್ತ್ರವಾಗಿ ಕೊರಗಜ್ಜನ ಕಟ್ಟೆಯ ನಾಮಫಲಕದ ಕೆಳಗೆ ನಿಂತಿರುವುದನ್ನು ನೋಡಿದ್ದಾರೆ. ಒಂಟಿ ಮಗುವೊಂದು ಈ ಹೊತ್ತಿನಲ್ಲಿ ಬರಲು ಹೇಗೆ ಸಾಧ್ಯ ಎಂದು ಆಲೋಚಿಸಿ ಮಗುವಿನ ರಕ್ಷಣಗೆ ಮುಂದಾಗಿದ್ದಾರೆ. ಮಗುವಿನ ಬಳಿ ಆಕೆಯ ಮನೆದಾರಿಯ ಬಗ್ಗೆ ತಿಳಿದುಕೊಂಡು ಅವರ ಮನೆಗೆ ತಲುಪಿಸಿ ಮಾನವೀಯತೆ ಮೆರೆದಿದ್ದಾರೆ. ಮಗು ಮನೆಯಿಂದ ಹೊರಗೆ ಹೋದ ಬಗ್ಗೆ ತಿಳಿಯದ ಮನೆಯವರು ದಂಗಾಗಿದ್ದಾರೆ. ನಿದ್ದೆ ಕಣ್ಣಿನಲ್ಲಿ ಹೊರ ಹೋದ ಬಾಲಕಿಯನ್ನು ಆ ದೈವವೇ ತಡೆದು ನಿಲ್ಲಿಸಿದ್ದಾರೆ ಎಂದು ಭಕ್ತರು ನಂಬಿದ್ದಾರೆ. ಬಾರಿನಲ್ಲಿ ಕೆಲಸ ಮಾಡುವ ಜನರು ಬರೀ ಕೆಟ್ಟ ಕೆಲಸಗಳನ್ನೇ ಮಾಡುತ್ತಾರೆ ಎಂದು ಹೇಳುವ ಜನರ ಮನಸ್ಥಿತಿಯನ್ನು ಇಂತಹ ಘಟನೆಗಳು ಬದಲಾಯಿಸುತ್ತವೆ.



