ಶಿರ್ವ ವ್ಯಾಪ್ತಿಯ ಕುರ್ಕಾಲು ಗ್ರಾಮ ಪಂಚಾಯತ್ ಕುಂಜಾರು ಗಿರಿಯ ಬಿಳಿಯಾರು ಪರಿಸರದಲ್ಲಿ ಸುಮಾರು 4 ದಿನಗಳಿಂದ ವಿದ್ಯುತ್ ಸಂಪರ್ಕ ಇಲ್ಲದೆ ಗ್ರಾಮಸ್ಥರು ಪರದಾಡುತ್ತಿದ್ದಾರೆ. ವಿದ್ಯುತ್ ಸಂಪರ್ಕ ಇಲ್ಲದೆ ನೀರಿನ ಅಭಾವದ ಜೊತೆಗೆ ಮನೆಯ ಫ್ರಿಜ್ ನಲ್ಲಿಟ್ಟಿದ್ದ ದಿನಬಳಕೆಯ ಸಾಮಗ್ರಿಗಳು ಕೂಡ ಹಾಳಾಗಿವೆ. ರಾತ್ರಿಯಿಡಿ ನಿದ್ದೆ ಇಲ್ಲದೆ ಜನರು ಸಾಕಷ್ಟು ತೊಂದರೆ ಅನುಭವಿಸಿದರು. ಮೆಸ್ಕಾಂ ಇಲಾಖೆಯ ಅಧಿಕಾರಿಗಳಿಗೆ ಕರೆ ಮಾಡಿದರೂ ಯಾವುದೇ ಸ್ಪಂದನೆ ನೀಡಿಲ್ಲ. ಹೀಗಾಗಿ ಇಂದು ಗ್ರಾಮಸ್ಥರು ಮತ್ತು ಕುರ್ಕಾಲು ಗ್ರಾಮ ಪಂಚಾಯತ್ ಮಾಜಿ ಸದಸ್ಯ ಎಂ.ಜಿ ನಾಗೇಂದ್ರ ನೇತೃತ್ವದಲ್ಲಿ ಶಿರ್ವ ಮೆಸ್ಕಾಂ ಕಚೇರಿಗೆ ಹೋಗಿ ಮನವಿ ಸಲ್ಲಿಸಿದರು.

ಮೆಸ್ಕಾಂ ಅಧಿಕಾರಿಗಳನ್ನು ಸ್ಥಳಕ್ಕೆ ಕರೆಸಿದ ಗ್ರಾಮಸ್ಥರು ಮತ್ತು ಕುರ್ಕಾಲು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ಮಹೇಶ್ ಶೆಟ್ಟಿ ಬಿಳಿಯಾರು ಅವರು ಅಧಿಕಾರಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡರು. ಮುಂದಿನ ದಿನಗಳಲ್ಲಿ ಯಾವುದೇ ತೊಂದರೆ ಆಗದ ರೀತಿಯಲ್ಲಿ ಕ್ರಮ ಕೈಗೊಳ್ಳುತ್ತೇವೆ. ಮೆಸ್ಕಾಂ ಸಿಬ್ಬಂದಿ ಕೊರತೆಯಿಂದಾಗಿ ಸಮಸ್ಯೆ ಆಗಿದೆ. ಈ ಭಾಗದಲ್ಲಿ ಹೆಚ್ಚುವರಿ ಸಿಬ್ಬಂದಿಯನ್ನು ನೇಮಿಸಿ ಯಾವುದೇ ಸಮಸ್ಯೆ ಆಗದಂತೆ ನೋಡಿಕೊಳ್ಳುತ್ತೇವೆ ಎಂದು ಅಧಿಕಾರಿಗಳು ಭರವಸೆ ನೀಡಿದರು. ಇದರಿಂದ ಗ್ರಾಮಸ್ಥರು ಸಮಾಧಾನಗೊಂಡರು. ಕುರ್ಕಾಲು ಗ್ರಾಮ ಪಂಚಾಯತ್ ಸದಸ್ಯೆ ಸಿಮಿ ಡಿಸೋಜಾ, ಸ್ಥಳೀಯರಾದ ಸುರೇಶ್ ಕುರ್ಕಾಲು ಹಾಗೂ ಗ್ರಾಮಸ್ಥರು ಇದ್ದರು.



