ಭಾರತೀಯ ವಾಯುಪಡೆಗಾಗಿ ಐದನೇ ತಲೆಮಾರಿನ ಸುಧಾರಿತ ಮಧ್ಯಮ ಶ್ರೇಣಿಯ ಯುದ್ಧ ವಿಮಾನಗಳನ್ನು ದೇಶೀಯವಾಗಿ ತಯಾರಿಸುವ ಬೃಹತ್ ಯೋಜನೆಯನ್ನು ಕಾರ್ಯಗತಗೊಳಿಸುವ ಯೋಜನೆಗೆ ರಕ್ಷಣಾ ಸಚಿವ ರಾಜನಾಥ ಸಿಂಗ್ ಇಂದು ಅನುಮೋದನೆ ನೀಡಿದ್ದಾರೆ.

ಈ ಮಹತ್ವಾಕಾಂಕ್ಷೆಯ ಯೋಜನೆಯೊಂದಿಗೆ ಭಾರತದ ವಾಯುಪಡೆಯ ಸಾಮರ್ಥ್ಯ ಇನ್ನಷ್ಟು ಹೆಚ್ಚಾಗಲಿದೆ. ದೇಶೀಯವಾಗಿ ಭಾರತದ ರಕ್ಷಣಾ ಸಾಮರ್ಥ್ಯವನ್ನು ವೃದ್ಧಿಸುವ ಯೋಜನೆ ಹಾಗೂ ಬಲಿಷ್ಠ ಏರೋಸ್ಪೇಸ್ ಕೈಗಾರಿಕಾ ಪರಿಸರ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಸುಧಾರಿತ ಮಧ್ಯಮ ಶ್ರೇಣಿಯ ಯುದ್ಧ ವಿಮಾನಗಳ ಕಾರ್ಯಕ್ರಮ ಅನುಷ್ಠಾನ ಮಾದರಿಗೆ ರಕ್ಷಣಾ ಸಚಿವ ರಾಜನಾಥ ಸಿಂಗ್ ಅನುಮೋದನೆ ನೀಡಿದ್ದಾರೆ ಎಂದು ರಕ್ಷಣಾ ಸಚಿವಾಲಯ ತಿಳಿಸಿದೆ.
ಕೈಗಾರಿಕಾ ಸಹಭಾಗಿತ್ವದೊಂದಿಗೆ ಏರೋನಾಟಿಕಲ್ ಡೆವಲಪ್‌ಮೆಂಟ್ ಏಜೆನ್ಸಿ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಲಿದೆ. ಅಲ್ಲದೆ ಖಾಸಗಿ ಹಾಗೂ ಸಾರ್ವಜನಿಕ ವಲಯಕ್ಕೆ ಸಮಾನ ಅವಕಾಶ ಸಿಗಲಿದೆ.
ದೇಶೀಯ ಸಾಮರ್ಥ್ಯ ಹಾಗೂ ಪರಿಣತಿ ಹೆಚ್ಚಿಸುವಲ್ಲಿ ಇದೊಂದು ಮಹತ್ತರ ಹೆಜ್ಜೆಯಾಗಿದೆ. ಅತ್ಮನಿರ್ಭರ ಭಾರತದತ್ತ ಪ್ರಮುಖ ಮೈಲಿಗಲ್ಲು ಆಗಿದೆ ಎಂದು ಉಲ್ಲೇಖಿಸಲಾಗಿದೆ.
ಈ ಯೋಜನೆಯ ಪ್ರಾಥಮಿಕ ವೆಚ್ಚ ಸುಮಾರು ₹15 ಸಾವಿರ ಕೋಟಿ ಎಂದು ಅಂದಾಜಿಸಲಾಗಿದೆ. ಲಘು ಯುದ್ಧ ವಿಮಾನ (ಎಲ್‌ಸಿಎ) ತೇಜಸ್ ಯಶಸ್ಸಿನ ನಂತರ ಎಎಂಸಿಎ ಅಭಿವೃದ್ಧಿಯಲ್ಲಿ ರಕ್ಷಣಾ ಇಲಾಖೆಯ ವಿಶ್ವಾಸ ಇಮ್ಮಡಿಯಾಗಿದೆ.



