ಇದುವರೆಗೂ ಐಪಿಎಲ್ ಟ್ರೋಫಿ ಗೆಲ್ಲದ ತಂಡಗಳಾದ ಪಂಜಾಬ್ ಕಿಂಗ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ಬುಧವಾರ ನಡೆಯುವ ಐಪಿಎಲ್ 2025 ರ ಕ್ವಾಲಿಫೈಯರ್ 1 ರಲ್ಲಿ ಕಣಕ್ಕಿಳಿಯಲಿದೆ. ಈ ತಂಡಗಳ ಪಂದ್ಯಕ್ಕೆ ಮುಲ್ಲನ್ಪುರ್‌ನ ಮಹಾರಾಜ ಯಾದವೀಂದ್ರ ಸಿಂಗ್ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ ಅಣಿಯಾಗಿದೆ. ಗೆಲುವು ಸಾಧಿಸಿದ ತಂಡ ನೇರವಾಗಿ ಫೈನಲ್ ಪ್ರವೇಶಿಸಲಿದೆ. ಸೋತ ತಂಡಕ್ಕೆ ಎರಡನೇ ಕ್ವಾಲಿಫೈಯರ್‌ನಲ್ಲಿ ಆಡುವ ಅವಕಾಶ ಸಿಗಲಿದೆ. ಆದರೆ ಪಂದ್ಯ ಮಳೆಯಿಂದ ರದ್ದಾದರೆ ಫಲಿತಾಂಶ ನಿರ್ಣಾಯ ಹೇಗೆ ಎಂಬ ಪ್ರಶ್ನೆ ಉಭಯ ತಂಡಗಳ ಅಭಿಮಾನಿಗಳಲ್ಲಿ ಎದ್ದಿದೆ.

ಶ್ರೇಯಸ್ ಅಯ್ಯರ್ ನೇತೃತ್ವದಲ್ಲಿ ಪಂಜಾಬ್ ಲೀಗ್‌ನಲ್ಲಿ 9 ಪಂದ್ಯ ಗೆದ್ದು 19 ಅಂಕದೊಂದಿಗೆ ಅಗ್ರಸ್ಥಾನ ಪಡೆಯಿತು. ಆರ್‌ಸಿಬಿ ಕೂಡ 9 ಪಂದ್ಯ ಗೆದ್ದು 19 ಅಂಕ ಗಳಿಸಿದೆ. ಆದರೆ ರನ್ ರೇಟ್‌ನಲ್ಲಿ ಹಿಂದಿದ್ದ ಕಾರಣ ದ್ವಿತೀಯ ಸ್ಥಾನಿಯಾಗಿದೆ.
ಕ್ವಾಲಿಫೈಯರ್ ಪಂದ್ಯಕ್ಕೆ ಮೀಸಲು ದಿನ ಇರದ ಕಾರಣ ಬುಧವಾರ ನಡೆಯುವ ಆರ್‌ಸಿಬಿ ಮತ್ತು ಪಂಜಾಬ್ ನಡುವಿನ ಪಂದ್ಯ ಮಳೆಯಿಂದ ರದ್ದಾದರೆ ಪಂಜಾಬ್ ಕಿಂಗ್ಸ್ ತಂಡ ನೇರವಾಗಿ ಫೈನಲ್ ಪ್ರವೇಶಿಸಲಿದೆ. ಕನಿಷ್ಠ 5 ಓವರ್‌ಗಳ ಪಂದ್ಯ ಅಥವಾ ಸೂಪರ್ ಓವರ್ ಕೂಡ ನಡೆಯಲಿದ್ದರೆ ಆಗ ಅಂಕಪಟ್ಟಿಯಲ್ಲಿ ಮೇಲಿನ ಸ್ಥಾನ ಪಡೆದ ತಂಡ ಮುನ್ನಡೆಯಲಿದೆ. ಆರ್‌ಸಿಬಿ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನ ಪಡೆದ ಕಾರಣ. ಪಂದ್ಯ ರದ್ದಾದರೆ ಮುಂಬೈ ಮತ್ತು ಗುಜರಾತ್ ನಡುವಿನ ಎಲಿಮಿನೇಟರ್ ಪಂದ್ಯದ ವಿಜೇತರನ್ನು ದ್ವಿತೀಯ ಕ್ವಾಲಿಫೈಯರ್‌ನಲ್ಲಿ ಎದುರಿಸಲಿದೆ.
ಆರ್‌ಸಿಬಿ ಹಾಲಿ ಆವೃತ್ತಿಯಲ್ಲಿ ತವರಿನಾಚೆ ಆಡಿದ ಎಲ್ಲ 7 ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ. ಇದರೊಂದಿಗೆ ಆವೃತ್ತಿಯೊಂದರಲ್ಲಿ ಎದುರಾಳಿ ನೆಲದಲ್ಲಿ ಆಡಿದ ಲೀಗ್‌ನ ಎಲ್ಲ ಪಂದ್ಯಗಳಲ್ಲಿ ಗೆಲುವು ಸಾಧಿಸಿದ ಮೊದಲ ತಂಡ ಎಂಬ ದಾಖಲೆ ಬರೆದಿದೆ. ಹೀಗಾಗಿ ಕ್ವಾಲಿಫೈಯರ್ ಪಂದ್ಯ ಕೂಡ ಗೆಲ್ಲಬಹುದು ಎಂಬ ನಂಬಿಕೆ ಅಭಿಮಾನಿಗಳದ್ದಾಗಿದೆ.



