ಕಳೆದ ಒಂದೆರಡು ತಿಂಗಳುಗಳಿಂದ ಪುತ್ತೂರು ತಾಲೂಕಿನ ಕೊಳ್ತಿಗೆ ಗ್ರಾಮದಲ್ಲಿ ಕೆಎಸ್‌ಆರ್‌ಟಿಸಿ ಬಸ್ಸುಗಳ ಸಮಸ್ಯೆ ಉಂಟಾಗಿದ್ದು ಈ ಬಗ್ಗೆ ಕೊಳ್ತಿಗೆ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಅಕ್ಕಮ್ಮನವರ ನೇತೃತ್ವದ ನಿಯೋಗವೊಂದು ಪುತ್ತೂರು ಕೆಎಸ್‌ಆರ್‌ಟಿಸಿ ಡಿಪೋ ಮ್ಯಾನೇಜರ್‌ರವರನ್ನು ಭೇಟಿಯಾಗಿ ಮನವಿ ಸಲ್ಲಿಸಿತು.

ಕೊಳ್ತಿಗೆ ಗ್ರಾಮದ ಜನಸಾಮಾನ್ಯರಿಗೆ ಕಳೆದ ಅನೇಕ ವರ್ಷಗಳಿಂದ ಸಂಚಾರ ವ್ಯವಸ್ಥೆಯ ಜೀವನಾಡಿಯಾಗಿದ್ದ ಕೆಲವು ಬಸ್ಸುಗಳು ಕಳೆದ 2 ತಿಂಗಳುಗಳಿಂದ ತಮ್ಮ ಓಡಾಟವನ್ನು ನಿಲ್ಲಿಸಿದ್ದುವು. ಇದರಿಂದಾಗಿ ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ಅನೇಕ ತೊಂದರೆಗಳು ಉಂಟಾಗುತ್ತಿರುವುದನ್ನು ಮನಗಂಡ ಕೊಳ್ತಿಗೆ ಗ್ರಾಮ ಪಂಚಾಯತ್ ಆಡಳಿತ ಅಧ್ಯಕ್ಷೆ ಶ್ರೀಮತಿ ಅಕ್ಕಮ್ಮನವರ ನೇತೃತ್ವದಲ್ಲಿ ನಿಯೋಗ ತೆರಳಿ ಡಿಪೋ ಮ್ಯಾನೇಜರ್ ಜೊತೆಗೆ ಚರ್ಚಿಸಿತು. ಪ್ರಸ್ತುತ ಡಿಪೋದಲ್ಲಿ ಬಸ್ಸು ಚಾಲಕರ ಹಾಗೂ ನಿರ್ವಾಹಕರ ಕೊರತೆಯಿರುವುದು ಈ ಸಮಸ್ಯೆಗೆ ಕಾರಣವಾಗಿದೆ. ಇದೀಗ ಚಾಲಕ – ನಿರ್ವಾಹಕರ ನೇಮಕಾತಿ ನಡೆಯುತ್ತಿದ್ದು ಮುಂದಿನ ತಿಂಗಳ ಜುಲೈ 1ರಿಂದ 80 ಮಂದಿ ಸಿಬ್ಬಂಧಿಗಳು ಡಿಪೋಗೆ ಸೇರಿಕೊಳ್ಳಲಿದ್ದಾರೆ. ಜುಲೈ ಒಂದನೇ ತಾರೀಖಿನಿಂದ ಮತ್ತೆ ಬಸ್ಸು ಸೇವೆಯನ್ನು ಹಿಂದಿನ0ತೆಯೇ ನೀಡಲಿದ್ದೇವೆ ಎಂದು ಡಿಪೋಮ್ಯಾನೇಜರ್ ನಿಯೋಗಕ್ಕೆ ಭರವಸೆ ನೀಡಿದರು. ನಿಯೋಗದಲ್ಲಿ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಪ್ರಮೋದ್ ಕೆ.ಎಸ್ , ಸದಸ್ಯರುಗಳಾದ ಪವನ್ ಡಿ.ಜಿ , ಶ್ರೀಮತಿ ವೇದಾವತಿ, ಶ್ರೀಮತಿ ಯಶೋದಾ ಹಾಗೂ ಪುತ್ತೂರು ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಅಮಳ ರಾಮಚಂದ್ರ, ಪುತ್ತೂರು ಕಾಂಗ್ರೆಸ್ ಮುಖಂಡರಾದ ರಾಮಚಂದ್ರ ಸೊರಕೆ ಮತ್ತು ರವೀಂದ್ರ ರೈ ನೆಕ್ಕಿಲು ಉಪಸ್ಥಿತರಿದ್ದರು.



