ಮಂಗಳೂರು: ನಗರದ ಮೋರ್ಗಾನ್ಸ್‌ಗೇಟ್‌ನಲ್ಲಿ ಜೂ.23ರಂದು ಭದ್ರತಾ ಸಿಬ್ಬಂದಿಗಾಗಿ ನಿರ್ಮಿಸಲಾಗಿದ್ದ ಕೊಠಡಿ ಮಳೆಯಿಂದ ಕುಸಿದು ಬಿದ್ದ ಘಟನೆ ಸಂಭವಿಸಿದೆ. ಘಟನೆಯಲ್ಲಿ ಇಬ್ಬರು ಗಾಯಗೊಂಡಿದ್ದಾರೆ. ವಿಷ್ಣು ಮತ್ತು ಚಂದ್ರಶೇಖರ ಪೂಜಾರಿ ಗಾಯಗೊಂಡ ಭದ್ರತಾ ಸಿಬ್ಬಂದಿ.
ಮೋರ್ಗಾನ್ಸ್‌ಗೇಟ್ ಮೊಯ್ಲಿ ಕೆರೆ ಬಳಿಯ ಕೆನ್‌ವುಡ್ ಪ್ಲೈ ಬೋರ್ಡ್ ಕಾರ್ಖಾನೆಯ ಭದ್ರತಾ ಸಿಬ್ಬಂದಿಗಾಗಿ ಮಳೆನೀರು ಹಾದುಹೋಗುವ ಚರಂಡಿಯ ಮೇಲ್ಭಾಗದಲ್ಲಿ ಕೊಠಡಿಯನ್ನು ನಿರ್ಮಿಸಲಾಗಿತ್ತು. ಈ ವೇಳೆ ಅದರೊಳಗಿದ್ದ ಇಬ್ಬರು ಸಿಬ್ಬಂದಿಗಳಿಗೆ ಗಾಯಗಳಾಗಿವೆ. ಇವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಪಾಂಡೇಶ್ವರ ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ್ದಾರೆ.



