ತೀರಾ ಸಾಧು ಸ್ವಭಾವದ ಎಲ್ಲರ ಅಚ್ಚುಮೆಚ್ಚಿನ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರೀ ದೇವಳದ ಬಸವ ಕೃಷ್ಣ(18) ತೀವ್ರ ಅಸ್ವಸ್ಥಗೊಂಡು ಪಶು ಅಸ್ಪತ್ರೆಗೆ ದಾಖಲಿಸಲಾಗಿದ್ದು ಚಿಕಿತ್ಸೆ ಫಲಕಾರಿಯಾಗದೆ ಮಂಗಳವಾರ ಬೆಳಿಗ್ಗೆ ಮೃತಪಟ್ಟಿದೆ.

ಶ್ರೀ ದೇವಳದ ಜಾತ್ರಾ ಮಹೋತ್ಸವ ಸಹಿತ ಬಲಿ ಉತ್ಸವಗಳಲ್ಲಿ ಭಾಗಿಯಾಗುತ್ತಾ ಸುದೃಢ ಶರೀರದ ಕೃಷ್ಣ ಕಳೆದ 8 ದಿನಗಳಿಂದ ಆಹಾರ ಸೇವಿಸದೆ, ಮಲಮೂತ್ರ ವಿಸರ್ಜಿಸದೆ ಇದ್ದ ಕಾರಣ ಸ್ಥಳೀಯ ಪಶು ವೈದ್ಯರಾದ ಡಾ.ಪ್ರಸನ್ನರವರಿಂದ ಚಿಕಿತ್ಸೆ ಪಡೆದಿದ್ದ. ವಾರ ಕಳೆದರೂ ಸಮಸ್ಯೆ ಪರಿಹಾರವಾಗದ ಕಾರಣ ವೈದ್ಯರ ಸಲಹೆಯಂತೆ ಕೃಷ್ಣನನ್ನು ಮಂಗಳೂರು ಪಶು ಅಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ವೈದ್ಯರಾದ ಡಾ.ಜಿ.ಕೆ.ಭಟ್ ಮತ್ತು ಡಾ.ಮೃದುಳಾ ಪರಿಶೀಲಿಸಿದ ಬಳಿ ಕೃತಕ ಪೈಪ್ ಅಳವಡಿಸಿ ಮಲಮೂತ್ರವನ್ನು ಹೊರತೆಗೆಯಲಾಗಿದ್ದು ಕನಿಷ್ಟ 8 ಬಕೆಟ್‌ನಷ್ಟು ಮೂತ್ರವನ್ನು ಹಾಗೂ ಶಸ್ತ್ರಚಿಕಿತ್ಸೆ ನಡೆಸಿ ಪ್ಲಾಸ್ಟಿಕ್ ತ್ಯಾಜ್ಯ ತೆಗೆದ ಬಳಿಕ ಕೃಷ್ಣ ಆಹಾರ ಸೇವಿಸಲು ಆರಂಭಿಸಿದ್ದು, ಶೀಘ್ರ ಸಮಸ್ಯೆ ಪರಿಹಾರವಾಗುವ ಭರವಸೆ ವ್ಯಕ್ತವಾಗಿತ್ತು. ಅದರಂತೆ ಸೋಮವಾರ ರಾತ್ರಿ ಬಸವ ಕೃಷ್ಣ ನನ್ನು ಬಪ್ಪನಾಡಿಗೆ ವಾಪಸ್ ತರಲಾಗಿ ಚಿಕಿತ್ಸೆ ಹಾಗೂ ಆಹಾರ ನೀಡಲಾಗುತ್ತಿತ್ತು
ಆದರೆ ಮಂಗಳವಾರ ಬೆಳಿಗ್ಗೆ 5 ಗಂಟೆಗೆ ಪಶುಪಾಲಕ ತಾರಾನಾಥ ಹೋಗಿ ನೋಡುವಾಗ ಬಸವ ಕೃಷ್ಣ ಉಸಿರು ನಿಲ್ಲಿಸಿದ್ದಾನೆ. ಬಳಿಕ ದೇವಸ್ಥಾನದ ಅನುವಂಶಿಕ ಮೊಕ್ತೇಸರ ದುಗ್ಗಣ್ಣ ಸಾವಂತ ಅರಸರು, ಕಾರ್ಯನಿರ್ವಹಣಾಧಿಕಾರಿ ಶ್ವೇತಾಪಳ್ಳಿ, ಮುಲ್ಕಿ ನ.ಪಂ ಅಧ್ಯಕ್ಷ ಸತೀಶ ಅಂಚನ್, ಸದಸ್ಯ ದಯಾವತಿ ಅಂಚನ್ ಬಾಲಚಂದ್ರ ಕಾಮತ್, ಮಾಜೀ ಸದಸ್ಯ ಪುರುಷೋತ್ತಮ್, ನಾಗೇಶ್ ಬಪ್ಪನಾಡು, ಶಿವಶಂಕರ್ ವರ್ಮ, ವಿಶ್ವನಾಥ ಬಪ್ಪನಾಡು, ಸಂಜೀವ ದೇವಾಡಿಗ, ದಯಾನಂದ ಮಟ್ಟು, ಸೇರಿ ಸಾವಿರಾರು ಜನ ಅಂತಿಮ ದರ್ಶನ ಪಡೆದು ಶ್ರದ್ಧಾಂಜಲಿ ಅರ್ಪಿಸಿದರು. ಬಳಿಕ ದೇವಸ್ಥಾನದ ಎದುರು ಭಾಗದಲ್ಲಿ ಅಂತಿಮ ವಿಧಿ ವಿಧಾನಗಳನ್ನು ಪೂರೈಸಿ ಬಸವ ಕೃಷ್ಣನನ್ನು ದಫನ ಮಾಡಲಾಯಿತು. 18 ವರ್ಷ ಪ್ರಾಯದ ಕೃಷ್ಣನನ್ನು 12ವರ್ಷಗಳ ಹಿಂದೆ ಶ್ರೀ ದೇವಳಕ್ಕೆ ಭಕ್ತರೊಬ್ಬರು ದಾನವಾಗಿ ನೀಡಿದ್ದರು.



