ದ.ಕ.ಜಿಲ್ಲೆಯಲ್ಲಿ ಭತ್ತದ ಕೃಷಿ ಕಡಿಮೆಯಾಗುತ್ತಾ ಬರುವ ಕಾಲಘಟ್ಟದಲ್ಲಿ ಯುವಕರ ತಂಡವೊಂದು ಸಮಾಜ ಸೇವೆಯ ಉದ್ದೇಶದಿಂದ ಭತ್ತದ ನಾಟಿಯನ್ನು ಮಾಡಿ ಗ್ರಾಮದಲ್ಲಿ ಗಮನ ಸೆಳೆದಿದ್ದಾರೆ.

“ರಥಬೀದಿ ಜವನೆರ್” ಎಂಬ ಹೆಸರಿನ ಸುಮಾರು 15 ಮಂದಿ ಸದಸ್ಯರು ಮಣಿನಾಲ್ಕೂರು ಗ್ರಾಮದ ಕೊಲ್ಯ ಎಂಬಲ್ಲಿ ಸುಶೀಲಮ್ಮ ಎಂಬವರ ಗದ್ದೆಯಲ್ಲಿ ಭತ್ತದ ನಾಟಿ ಮಾಡಿದ್ದಾರೆ. ಸುಮಾರು ಒಂದು ಎಕರೆ ಗದ್ದೆಯಲ್ಲಿ ಶ್ರಮದಾನದ ಮೂಲಕ ಭತ್ತ ನಾಟಿ ಮಾಡಿ ಸೈ ಎನಿಸಿದ್ದಾರೆ. ಭತ್ತದ ಕೃಷಿಯ ಬಗ್ಗೆ ಅಷ್ಟೊಂದು ಅರಿವಿಲ್ಲದ ಈ ತಂಡ ಹಿರಿಯರ ಸಲಹೆ ಪಡೆದು ಯಾಂತ್ರಿಕ ಉಳುಮೆ ಮಾಡಿದ ಬಳಿಕ ಸ್ವತಃ ಯುವಕರೇ ನೇಜಿ ನೆಟ್ಟಿದ್ದಾರೆ.

ಗದ್ದೆಯಲ್ಲಿ ಬೆಳೆದ ಬೈ ಹುಲ್ಲು ಸ್ಥಳೀಯ ಗೋ ಶಾಲೆಗೆ ಹಾಗೂ ಬೆಳೆದ ಅಕ್ಕಿಯನ್ನು ಸ್ಥಳೀಯ ಅನಾಥಶ್ರಮಕ್ಕೆ ನೀಡುವ ಉದ್ದೇಶದಿಂದ ಗದ್ದೆಯಲ್ಲಿ ಬೇಸಾಯ ಮಾಡಿದ್ದೇವೆ ಎಂದು ಹೇಳುವ ತಂಡ ಯಾವುದೇ ಪ್ರಚಾರದ ಹುಚ್ಚು ಅವರಿಗಿಲ್ಲ. ಗ್ರಾಮೀಣ ಭಾಗದಲ್ಲಿ ಕೃಷಿ ಉಳಿಯಬೇಕು ಮತ್ತು ಅದರ ಜೊತೆಗೆ ಸಾಮಾಜಿಕ ಕಾರ್ಯವಾಗಬೇಕು ಎಂಬುದೇ ನಮ್ಮ ಧ್ಯೇಯವಾಗಿದೆ ಎಂದು ಹೇಳುವ ತಂಡ ಗ್ರಾಮದಲ್ಲಿ ಮಾದರಿ ಕಾರ್ಯ ಮಾಡಿದ್ದಾರೆ ಎಂಬ ಮಾತುಗಳು ಕೇಳಿ ಬಂದಿವೆ.



