ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ಹೊಸ ನ್ಯಾಯಾಲಯ ಕಟ್ಟಡ ಸಿದ್ಧಗೊಂಡು ಉದ್ಘಾಟನೆಗೆಗಾಗಿ ಕಾಯುತ್ತಿದೆ. ಸದ್ಯ ಹಳೆ ಕಟ್ಟಡದಲ್ಲಿ ಕಾರ್ಯಾಚರಿಸುತ್ತಿರುವ ನ್ಯಾಯಾಲಯವು ಉದ್ಘಾಟನೆ ಬಳಿಕ ಬನ್ನೂರಿನ ಹೊಸ ನ್ಯಾಯಾಲಯ ಸಂಕೀರ್ಣಕ್ಕೆ ಶಿಫ್ಟ್ ಆಗಲಿದೆ.
2022ರಲ್ಲಿ ಈ ಹೊಸ ನ್ಯಾಯಾಲಯ ಕಟ್ಟಡದ ನಿರ್ಮಾಣಕ್ಕೆ ಶಿಲಾನ್ಯಾಸ ನೆರವೇರಿಸಿದ ಬಳಿಕ ಇದೀಗ ಕಟ್ಟಡದ ಬಹುತೇಕ ಕಾಮಗಾರಿಗಳು ಮುಕ್ತಾಯವಾಗಿದೆ. ಅಂದಿನ ಶಾಸಕರಾಗಿದ್ದ ಸಂಜೀವ ಮಠಂದೂರು ಮೂಲಕ ಸುಮಾರು 50 ಕೋಟಿ ವೆಚ್ಚದ ನ್ಯಾಯಾಲಯ ಸಂಕೀರ್ಣ ಮತ್ತು 5 ಕೋಟಿ ವೆಚ್ಚದ ವಕೀಲರ ಸಂಘದ ಕಟ್ಟಡ ಇಲ್ಲಿ ನಿರ್ಮಾಣಗೊಂಡಿದೆ. ಮೊದಲ ಹಂತದಲ್ಲಿ 25 ಕೋಟಿ ರೂಪಾಯಿ ವೆಚ್ಚದಲ್ಲಿ ನ್ಯಾಯಾಲಯ ಸಂಕೀರ್ಣ ಮತ್ತು 5 ಕೋಟಿ ರೂಪಾಯಿ ವೆಚ್ಚದಲ್ಲಿ ವಕೀಲರ ಸಂಘದ ಕಟ್ಟಡವನ್ನು ನಿರ್ಮಿಸುವ ಯೋಜನೆಯಿತ್ತು. ಆ ಬಳಿಕ ಅಂದಿನ ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಅಬ್ದುಲ್ ನಜೀರ್ ಇದೇ ನ್ಯಾಯಾಲಯ ಸಂಕೀರ್ಣ ಜಿಲ್ಲಾ ನ್ಯಾಯಾಲಯದ ಸ್ಥಾಪನೆಗೂ ಅವಕಾಶವಿರಬೇಕು ಎನ್ನುವ ಕಾರಣಕ್ಕೆ ಇದೇ ಕಟ್ಟಡಕ್ಕೆ ಹೆಚ್ಚುವರಿ 25 ಕೋಟಿ ರೂಪಾಯಿಗಳನ್ನು ವಿನಿಯೋಗಿಸಿ ಒಟ್ಟು 55 ಕೋಟಿ ರೂಪಾಯಿ ವ್ಯಯಿಸಿ ಈ ಕಟ್ಟಡದ ನಿರ್ಮಾಣವಾಗಿದೆ.



