ಹಿಂದೊಂದು ಕಾಲವಿತ್ತು, ಮನೆಗೆ ಬೇಕಾದ ಸಾಮಾಗ್ರಿಗಳನ್ನು ತರಬೇಕಾದರೆ, ಹಬ್ಬಕ್ಕೆ ಬಟ್ಟೆ ಖರೀದಿಸಬೇಕಿದ್ದರೆ ಅಥವಾ ಒಳ್ಳೆಯ ಹೋಟೆಲಿನಲ್ಲಿ ಆಹಾರ ಸವಿಯಬೇಕಾದರೆ ಮನೆಯಿಂದ ಮೈಲಿಗಟ್ಟಲೆ ದೂರವಿರುತ್ತಿದ್ದ ಪೇಟೆಗೆ ಹೋಗಬೇಕಿತ್ತು. ನಿತ್ಯವೂ ಪೇಟೆಗೆ ಹೋಗಿ ವಸ್ತುಗಳನ್ನು ತರಲು ಸಾಧ್ಯವಾಗದ ಕಾರಣ ಒಂದೋ ಎರಡೋ ತಿಂಗಳಿಗೆ ಬೇಕಾದ ಅಗತ್ಯ ಸಾಮಾಗ್ರಿಗಳನ್ನು ಒಮ್ಮೆಲೇ ತಂದು ಸಂಗ್ರಹಿಸಿಡಬೇಕಿತ್ತು. ಆದರೇ ಈಗ ಕಾಲ ಬದಲಾಗಿದೆ, ತಂತ್ರಜ್ಞಾನ ಎಲ್ಲವನ್ನು ಸುಗಮಗೊಳಿಸಿದೆ. ಕೈಯಲ್ಲೊಂದು ಸ್ಮಾರ್ಟ್ ಫೋನ್ ಬಂದ ಮೇಲಂತೂ ವಸ್ತುಗಳ ಖರೀದಿ ಮತ್ತಷ್ಟು ಸುಲಭವಾಗಿದೆ.

ವಸ್ತುಗಳ ಖರೀದಿಗೆಂದೇ ನೂರಾರು ಮೊಬೈಲ್ ಅಪ್ಲಿಕೇಶನ್‌ಗಳು ಜನ್ಮ ತಾಳಿವೆ. ದಿನಸಿ, ಬಟ್ಟೆ, ಊಟ ಹೀಗೆ ಪ್ರತ್ಯೇಕ ವಸ್ತುಗಳ ಖರೀದಿಗೆ ಪ್ರತ್ಯೇಕ ಅಪ್ಲಿಕೇಶನ್ ಗಳು ಇಂದು ಚಾಲ್ತಿಯಲ್ಲಿವೆ. ಈ ಅಪ್ಲಿಕೇಶನ್‌ಗಳನ್ನು ಬಳಸಿಕೊಂಡು ನಮಗೆ ಬೇಕಾದ ವಸ್ತುಗಳನ್ನು ಆರ್ಡರ್ ಮಾಡಿದರೆ ಕೆಲವೇ ದಿನಗಳೊಳಗೆ ಅವುಗಳು ನಮ್ಮ ಮನೆ ಬಾಗಿಲಿಗೆ ಬಂದು ಬೀಳುತ್ತವೆ. ಇದರಿಂದ ಹಿಂದಿನ ಕಾಲದವರಂತೆ ನಾವು ಪೇಟೆಗೆ ಹೋಗಬೇಕಿಲ್ಲ, ಬದಲಾಗಿ ಡೆಲಿವರಿ ಏಜೆಂಟ್ ಗಳು ನಾವು ಆರ್ಡರ್ ಮಾಡಿದ ವಸ್ತುಗಳನ್ನು ನಮ್ಮ ಮನೆಬಾಗಿಲಿಗೆ ತಲುಪಿಸುತ್ತಾರೆ. ನಮ್ಮ ಕೆಲಸದ ಹೊರೆಯನ್ನು ಕೊಂಚ ಕಡಿಮೆ ಮಾಡಿರುವ ಆ ಡೆಲಿವರಿ ಏಜೆಂಟ್ ಗಳನ್ನು ಗೌರವಿಸುವುದನ್ನು ನಾವು ಕಲಿಯಬೇಕಿದೆ .

ಈ ವಸ್ತುಗಳ ಹೋಮ್ ಡೆಲಿವರಿಯಿಂದ ಅದ್ಯಾರಿಗೆ ಏನು ಪ್ರಯೋಜನವಾಯಿತೋ ಗೊತ್ತಿಲ್ಲ, ಆದರೆ ಅವೆಷ್ಟು ನಿರುದ್ಯೋಗಿಗಳಿಗೆ ಇಂದು ಅದು ಕೆಲಸ ಕೊಟ್ಟಿದೆ, ಸ್ವಂತ ದುಡ್ಡಿನಿಂದ ಕಲಿಯಬೇಕು, ಸಾಧಿಸಬೇಕು ಎನ್ನುವ ಅವೆಷ್ಟೋ ಸ್ವಾಭಿಮಾನಿಗಳಿಗೆ ಅದು ನೆರವಾಗಿದೆ. ನಮ್ಮ ವಸ್ತುಗಳನ್ನು ಮನೆಬಾಗಿಲಿಗೆ ಮುಟ್ಟಿಸುವ ಈ ಡೆಲಿವರಿ ಏಜೆಂಟ್‌ಗಳ ಹಿಂದೆ ನೂರಾರು ಕಷ್ಟದ ಕಥೆಗಳಿರುತ್ತವೆ, ಅವರೊಳಗೆ ಹೇಳಲಾಗದ ಅವರದ್ದೇ ಸಾವಿರಾರು ವ್ಯಥೆಗಳಿರುತ್ತವೆ. ಅದೇನೇ ಇದ್ದರು ಜವಾಬ್ದಾರಿಯ ಭಾರವನ್ನು ಬೆನ್ನ ಮೇಲೆ ಹೊತ್ತುಕೊಂಡು ಬಿಸಿಲು, ಮಳೆ, ಚಳಿ ಯಾವುದನ್ನು ಲೆಕ್ಕಿಸದೆ ತಮ್ಮ ಕೆಲಸದಲ್ಲಿ ತೊಡಗಿರುವ ಎಲ್ಲ ಡೆಲಿವರಿ ಏಜೆಂಟ್‌ಗಳಿಗೂ ನಾವೆಲ್ಲಾ ಒಂದು ಸಲಾಂ ಹೊಡೆಯಲೇಬೇಕು. ಸದಾ ನಗುವಿನೊಂದಿಗೆ ಸರ್, ಮೇಡಂ ಎನ್ನುತ್ತಾ ಗೌರವದಿಂದಲೇ ನಮ್ಮನ್ನು ಮಾತನಾಡಿಸುವ ಅವರನ್ನು ಸರಿಯಾಗಿ ನಡೆಸಿಕೊಳ್ಳುವುದರಲ್ಲಿ ನಾವುಗಳು ಸುಮಾರು ಬಾರಿ ಎಡವುತ್ತೇವೆ. ವಿಳಾಸ ತಿಳಿಯದೆ ಅವರು ಒಂದೆರಡು ಬಾರಿ ಹೆಚ್ಚಾಗಿ ನಮಗೆ ಕಾಲ್ ಮಾಡಿದರೆ ಅವರ ಮೇಲೆ ಕೋಪದಿಂದ ರೇಗಾಡಿಯೇ ಬಿಡುತ್ತೇವೆ. ನಮ್ಮಿಂದ ಬೈಸಿಕೊಂಡರೂ ತಾಳ್ಮೆ ಕಳೆದುಕೊಳ್ಳದೆ ಅದೇ ನಗುಮುಖದಿಂದಲೇ ನಮ್ಮ ಡಿಲಿವರಿ ನೀಡುವ ಎಲ್ಲಾ ಏಜೆಂಟ್‌ಗಳ ಸಹನೆ ನಿಜಕ್ಕೂ ಮೆಚ್ಚುವಂತದ್ದೇ.
ಇಂದಿಗೆ ಅದೆಷ್ಟೋ ಓದುವ ವಿದ್ಯಾರ್ಥಿಗಳು ಹಗಲು ಕಾಲೇಜಿಗೆ ಹೋಗಿ ರಾತ್ರಿ ಸ್ವಿಗ್ಗಿ, ಝೊಮ್ಯಾಟೋ ಮುಂತಾದ ಫುಡ್ ಡೆಲಿವರಿ ಪ್ಲಾಟ್ ಫಾರ್ಮ್ ಗಳಿಗೆ ದುಡಿದು ತಮ್ಮ ಓದಿಗೆ ಹಣ ಹೊಂದಿಸುತ್ತಿದ್ದಾರೆ. ನಮ್ಮ ಆರ್ಡರ್ ಬರುವುದು ಕೊಂಚ ತಡವಾದರೂ ನಮ್ಮ ಸಿಟ್ಟು ತಾರಕಕ್ಕೇರುತ್ತದೆ. ಒಮ್ಮೆ ನಾವೆಲ್ಲ ಯೋಚಿಸಬೇಕು, ಅದ್ಯಾವುದೋ ಅಪರಿಚಿತ ವಿಳಾಸವನ್ನು ಕ್ಷಣಮಾತ್ರದಲ್ಲಿ ಹುಡುಕಿ ನಮ್ಮ ವಸ್ತುವನ್ನು ನಮಗೆ ತಲುಪಿಸಬೇಕಾದರೆ ಆ ಡೆಲಿವರಿ ಏಜೆಂಟ್‌ಗಳು ಅದೆಷ್ಟು ಕಷ್ಟಪಟ್ಟಿರಬೇಡ. ಇಷ್ಟೆಲ್ಲ ಒದ್ದಾಡುವ ಅವರಿಗೆ ಕನಿಷ್ಠ ಹತ್ತು ರೂಪಾಯಿ ಟಿಪ್ಸ್ ಕೊಡುವುದಕ್ಕೂ ನಾವೆಲ್ಲ ಹತ್ತು ಬಾರಿ ಯೋಚಿಸುತ್ತೇವೆ. ನಾವು ಕೊಟ್ಟ ಹಣದಲ್ಲಿ ಚಿಲ್ಲರೆ ಹಣ ಹೆಚ್ಚಿದ್ದರೂ ಆ ಚೇಂಜ್ ಹಿಂತಿರುಗಿಸುವಂತೆ ಅವರ ಮುಂದೆ ಕೈಚಾಚಿ ನಿಲ್ಲುತ್ತೇವೆ. ಹೌದು ಸ್ವಾರ್ಥ ಮನುಷ್ಯನ ಸಹಜ ಗುಣ ಆದರೆ ಮನುಷ್ಯತ್ವ ಮೀರಿ ನಮ್ಮ ಸ್ವಾರ್ಥ ಬೆಳೆಯಬಾರದು. ನಾವುಗಳು ಸಹೃದಯದಿಂದ, ನಿಸ್ವಾರ್ಥ ಮನೋಭಾವದಿಂದ ಕನಿಷ್ಠ ಹತ್ತು ರೂಪಾಯಿ ಅವರಿಗೆ ಕೊಟ್ಟರು ಅವರಲ್ಲೊಂದು ಸಣ್ಣ ಮಂದಹಾಸ ಮೂಡುತ್ತದೆ, ನಮ್ಮ ಹತ್ತು ರೂಪಾಯಿ ಅವರ ಬದುಕಿನಲ್ಲಿ ಸಣ್ಣ ಬದಲಾವಣೆಯೊಂದಕ್ಕೆ ಕಾರಣವಾಗಬಹುದು. ಹೌದು ಅವರ ಕೆಲಸಕ್ಕೆ ಅವರಿಗೆ ಸಂಬಳ ಸಿಗುತ್ತದೆ ನಿಜ. ಆದರೆ ಆ ಸಂಬಳದ ಹಣ ಮೀರಿ ಅವರು ಕಷ್ಟಪಡುತ್ತಾರೆ. ಆ ಪರಿಶ್ರಮವನ್ನು ನಾವೆಲ್ಲ ಗೌರವಿಸಬೇಕು.

ಅದೆಂತಹ ಟ್ರಾಫಿಕ್ ಇದ್ದರೂ, ಅದ್ಯಾವ ಅಪರಿಚಿತ ವಿಳಾಸವಿದ್ದರೂ ನಮ್ಮ ಅವಶ್ಯಕತೆಯನ್ನು ಪೂರೈಸಲು ಒದ್ದಾಡಿ, ಹೋರಾಡಿ ನಮ್ಮೆಡೆಗೆ ಯೋಧರಂತೆ ಬರುವ ಪ್ರತಿಯೊಬ್ಬ ಡೆಲಿವರಿ ಏಜೆಂಟ್ ಗಳ ಕಾರ್ಯ ನಿಜಕ್ಕೂ ಶ್ಲಾಘನೀಯ. ಅವರು ನಮ್ಮ ಮನೆಬಾಗಿಲಿಗೆ ಬಂದಾಗ ನಮ್ಮ ಮುಖದಲ್ಲೊಂದು ಸಣ್ಣ ನಗುವಿರಲಿ, ಅವರನ್ನ ಪ್ರೀತಿಯಿಂದ ಮಾತಾನಾಡಿಸುವ ಹೃದಯ ಶ್ರೀಮಂತಿಕೆಯಿರಲಿ. ಅವರು ಕರೆಮಾಡಿದಾಗ ತಾಳ್ಮೆಯಿಂದ ಸರಿಯಾದ ವಿಳಾಸ ಹೇಳಿ ಅವರ ಪರಿಶ್ರಮದ ಭಾರವನ್ನು ಕೊಂಚ ಕಡಿಮೆಗೊಳಿಸೋಣ. ತಂತ್ರಜ್ಞಾನ ಈ ನಿಟ್ಟಿನಲ್ಲಿ ಬೆಳೆದ ಪರಿಣಾಮ ಇಂದು ಅದೆಷ್ಟೋ ಜನರಿಗೆ ಡೆಲಿವರಿ ಏಜೆಂಟ್ ಗಳಾಗಿ ಉದ್ಯೋಗ ದೊರೆತಿದೆ. ಕಷ್ಟವೋ ಸುಖವೋ ಸದಾ ನಮ್ಮ ಸೇವೆಯಲ್ಲಿ ಕಾರ್ಯಪ್ರವೃತ್ತರಾಗಿರುವ ಎಲ್ಲಾ ಡೆಲಿವರಿ ಏಜೆಂಟ್ ಗಳಿಗೆ ಈ ಮೂಲಕ ಒಂದು ಧನ್ಯವಾದ ನಾವುಗಳು ಸಲ್ಲಿಸಲೇಬೇಕು.
ಚೇತನ್ ಕಾಶಿಪಟ್ನ



