ಪ್ರಸ್ತುತ ನಮ್ಮ ಬದುಕು ಚಿಂತೆ, ಜಂಜಾಟಗಳಿಂದಲೇ ತುಂಬಿ ಹೋಗಿ ನಗು, ನೆಮ್ಮದಿ ಎಂಬುದು ಮರುಭೂಮಿಯಲ್ಲಿ ಸುರಿಯುವ ಮಳೆಯಂತೆ ಅಪರೂಪವಾಗಿಬಿಟ್ಟಿದೆ.. ಎಳೆಯವಯಸ್ಸಿನಲ್ಲಿ, “ಒಮ್ಮೆ ಬೆಳೆದು ದೊಡ್ಡವನಾಗಿ ಬಿಡಬೇಕು, ಈ ಶಾಲೆ, ಶಿಕ್ಷಣ ಎಂಬ ಬಂಧನಗಳಿಂದ ಹೊರಬಂದು ಹಾರುವ ಹಕ್ಕಿಯಂತೆ ಸ್ವತಂತ್ರನಾಗಬೇಕು” ಎಂಬೆಲ್ಲ ಬಯಕೆಗಳಿತ್ತು.. ಆದರೆ ಬೆಳೆದ ಈ ವಯಸ್ಸಿನಲ್ಲಿ ಮನಸು ಮತ್ತದೇ ಬಾಲ್ಯದ ಮಗುವಾಗುವ ಅಭಿಲಾಷೆ ವ್ಯಕ್ತಪಡಿಸುತ್ತಿದೆ.. ಕಾರಣ ಆ ದಿನಗಳಲ್ಲಿ ನೆಮ್ಮದಿಗೆ ಕೊರತೆ ಇರಲಿಲ್ಲ ಮತ್ತು ಚಿಂತೆ ಇಲ್ಲದೆ ಮನಸಾರೆ ನಾವೆಲ್ಲ ನಕ್ಕಿದ್ದು ಆಗ ಮಾತ್ರ ಅನ್ನಿಸುತ್ತದೆ.

ಹೌದು ಆಗೆಲ್ಲ ಭವಿಷ್ಯದ ಚಿಂತೆಯಿರಲಿಲ್ಲ, ಮುಂದೇನು ಎನ್ನುವ ದೊಡ್ಡದೊಂದು ಪ್ರಶ್ನಾನಾರ್ಥಕ ಚಿಹ್ನೆ ನಮ್ಮನ್ನು ಆವರಿಸಿರಲಿಲ್ಲ. ವರ್ತಮಾನವನ್ನು ಆನಂದಿಸುವ, ಆ ಕ್ಷಣವನ್ನು ಉತ್ಸಾಹದಿಂದ ಸವಿಯುವ ಹುಮ್ಮಸ್ಸು ದುಪ್ಪಟ್ಟಿತ್ತು. ಈಗೆಲ್ಲ ಭವಿಷ್ಯದ ಚಿಂತೆಯ ಜೊತೆಗೆ ಹಿಂದೆ ಮಾಡಿದ ತಪ್ಪಿನ ಬಗ್ಗೆ ಯೋಚಿಸುತ್ತಾ ಇರುವ ಸಮಯವನ್ನು ಆನಂದಿಸುವುದನ್ನು ಕೂಡ ನಾವುಗಳು ಮರೆತುಬಿಟ್ಟಿದ್ದೇವೆ. ಕೆಲಸ, ಶಿಕ್ಷಣ ಎಂದೆಲ್ಲ ತೀರಾ ಬ್ಯುಸಿಯಾಗಿ, ನೂರಾರು ಚಿಂತೆಗಳನ್ನು ತಲೆಯಲ್ಲಿ ತುಂಬಿಕೊಂಡು ಸರಿಯಾಗಿ ನಿದ್ರಿಸದೆ ಅರೋಗ್ಯ ಕೆಡಿಸಿಕೊಳ್ಳುವುದೇ ಸದ್ಯ ಲೈಫ್ ಸ್ಟೈಲ್ ಆಗಿ ಬಿಟ್ಟಿದೆ. ಸಂಪಾದನೆ, ಸಾಧನೆ ಎಂದೆಲ್ಲ ಒದ್ದಾಡುವ ನಾವುಗಳು ನಗುವುದನ್ನೇ ಮರೆತುಬಿಟ್ಟಿದ್ದೇವೆ. ನೆಮ್ಮದಿ ಎಂಬ ಪದದಿಂದ ಕಿಲೋಮೀಟರ್ ಗಟ್ಟಲೆ ಸಾಮಾಜಿಕ ಅಂತರ ಕಾಯ್ದುಕೊಂಡಿದ್ದೇವೆ.

ಬಾಲ್ಯದ ಆ ದಿನಗಳಲ್ಲಿ ಕಿಸೆ ಖಾಲಿಯಿರುತಿತ್ತು ಆದರೆ ಮನಸು ನೆಮ್ಮದಿಯಿಂದ ತುಂಬಿರುತಿತ್ತು. ಅದೇ ಇಂದು ಕಿಸೆ ತುಂಬಿದೆ ಆದರೆ ಮನವೆಂಬ ಬಲೂನು ನೆಮ್ಮದಿಯ ಗಾಳಿಯಿಲ್ಲದೆ ದುರ್ಬಲಗೊಂಡಿದೆ. ಹಣ್ಣ ಸುರಿದು ನೆಮ್ಮದಿ ಬಯಸುವ ನಾವುಗಳು ಬಾಲ್ಯದಲ್ಲಿ ಸಣ್ಣಪುಟ್ಟ ವಿಷಯಗಳಲ್ಲಿ ಖುಷಿ ಹುಡುಕುತ್ತಿದ್ದ ಬಗೆಯನ್ನು ಮರೆತೇ ಬಿಟ್ಟಿದ್ದೇವೆ. ಎಷ್ಟು ಕೊಟ್ಟರು ಇನ್ನೂ ಬೇಕು ಎನ್ನುವ ಆಕಾ0ಕ್ಷಿಗಳಾಗಿರುವ ನಾವುಗಳು ಬಾಲ್ಯದಲ್ಲಿ ಇದ್ದ ವಸ್ತುಗಳಲ್ಲೇ ಎಲ್ಲಿಲ್ಲದ ಖುಷಿಪಡುತ್ತಿದ್ದ ದಿನಗಳನ್ನು ನೆನಪಿಸಿಕೊಳ್ಳಬೇಕಿದೆ.

ಸರಕಾರಿ ಶಾಲೆಯಲ್ಲಿ ಬಾಲ್ಯದ ಶಿಕ್ಷಣ ಪೂರೈಸಿದ ನನ್ನಂತವನಿಗೆ ಆ ಹಳೆಯ ಹಂಚಿನ ಕಟ್ಟಡ ಕೊಟ್ಟಷ್ಟು ನೆಮ್ಮದಿ, ಸಂತೋಷ ಜಗತ್ತಿನ ಬೇರಾವುದೇ ಜಾಗ ನೀಡಿಲ್ಲ ಮತ್ತು ನೀಡುವುದು ಇಲ್ಲ ಪ್ರಯಾಷಃ ಇತರರನ್ನು ಮೆಚ್ಚಿಸಲು ನೋವಿದ್ದರೂ ನಗುವ ಹಾಗೇ ನಟಿಸಬೇಕಾದ ಈ ಕಾಲಕ್ಕಿಂತ, ಮುಗ್ಧತೆ ಮತ್ತು ಸ್ವತಂತ್ರಯುತವಾಗಿ ವ್ಯಕ್ತವಾಗುತ್ತಿದ್ದ ಬಾಲ್ಯದ ಭಾವನೆಗಳೇ ಚೆಂದವಿತ್ತು.. ಚಿಂತೆ ಎಂಬ ಪದದ ಅರ್ಥ ತಿಳಿಯದೆ ಕಳೆದ ಬಾಲ್ಯ ಚಿಂತೆಯಿಂದಲೇ ಬದುಕು ತುಂಬಿಕೊಂಡ ಈ ಕಾಲಕ್ಕೆ ಎಟುಕದಷ್ಟು ದೂರವಾಗಿಬಿಟ್ಟಿದೆ..

ಆಟ -ಪಾಠಗಳೊಂದಿಗೆ ತರ್ಲೆ ತುಂಟಾಟಗಳು, ಪೆಟ್ಟು -ಬೈಗುಳಗಳ ಹಿಂದೆ ಇರುತ್ತಿದ್ದ ಶಿಕ್ಷಕರ ಕಾಳಜಿ ಪ್ರೀತಿಗಳು, ಮಧ್ಯಾಹ್ನದ ಬಿಸಿಯೂಟ, ಅಡುಗೆ ಸಿಬ್ಬಂದಿಗಳೊಂದಿಗಿನ ಭಾಂಧವ್ಯ, ಶಾಲೆ ಎದುರಿನ ಸಾಹೇಬರ ಅಂಗಡಿ, ಶೆಟ್ಟರ ಮನೆಯಲ್ಲಿ ಕದ್ದು ತಿಂದ ಮಾವಿನಹಣ್ಣು, ಮಳೆಯಲ್ಲಿ ನೆನೆದುಕೊಂಡು ಬಂದು ಅಮ್ಮನ ಬಾಯಲ್ಲಿ ಕೇಳುತ್ತಿದ್ದ ಬೈಗುಳಗಳು ಎಲ್ಲವೂ ಈಗ ಕಳೆದ ಸಮಯ ಕೊಟ್ಟ ನೆನೆಪುಗಳಷ್ಟೇ.. ತೀರಾ ದೊಡ್ಡವರಾಗಿ ಬೆಳೆದು ಪಡೆದುಕೊಂಡದ್ದು ಚಿಂತೆ, ಜಂಜಾಟಗಳಿಂದ ಕಳೆದುಕೊಂಡದ್ದು ನೆಮ್ಮದಿಯನ್ನು.. ಜೀವನದ ಜಂಜಾಟದಲ್ಲಿ ಬಳಲಿ ಬೆಂಡಾದ ಮನಸು ಮತ್ತೆ ಬಾಲ್ಯದ ನೆಮ್ಮದಿಯನ್ನು ಬಯಸಿದೆ. ಯಾಕೆಂದರೆ ಜವಾಬ್ದಾರಿಗಳ ಒತ್ತಡವಿಲ್ಲದೆ, ಚಿಂತೆ ಎಂಬ ಪದದ ಅರ್ಥ ತಿಳಿಯದೆ ನಾವೆಲ್ಲ ಮನಸಾರೆ ನಕ್ಕಿದ್ದು ಆಗ ಮಾತ್ರ..
ಚೇತನ್ ಕಾಶಿಪಟ್ನ



