ಕುಂದಾಪುರದಲ್ಲಿ ಜು. 22ರಂದು ಬೈಂದೂರು ಪೊಲೀಸ್ ಠಾಣೆ ವ್ಯಾಪ್ತಿಯ ಶಿರೂರು ಸಮೀಪದ ಹಡವಿನಗದ್ದೆಯಲ್ಲಿರುವ ಮಸೂದ್ ಪಟೇಲ್ ಭಟ್ಕಳ ಅವರ ರೋಯಲ್ ಪ್ಲಾಂಟೇಶನ್ ಗೋದಾಮಿನಿಂದ ಸುಮಾರು 5.6 ಲಕ್ಷ ರೂಪಾಯಿ ಮೌಲ್ಯದ ಅಡಿಕೆ ಕಳವು ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಕಡಬ ತಾಲೂಕಿನ ನೂಜಿ ಬಾಳ್ತಿಲದ ಸಂತೋಷ (35), ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ಹಿಂಡಿನಗೆರೆಯ ಪ್ರಸ್ತುತ ಭಟ್ಕಳದಲ್ಲಿ ವಾಸವಾಗಿರುವ ಶಾನೂರ್ ಬಾಬುಲಾಲ್ ನವಾಜ್ ಘಜ್ನಿ (31), ಭಟ್ಕಳದ ಖ್ವಾಜಾ ಮೊಹಮ್ಮದ್ (26) ಮತ್ತು ಮೊಹಮ್ಮದ್ ಸಾದಿಕ್ (27) ಭಂಧಿತ ಆರೋಪಿಗಳು. ಪೊಲೀಸರು 455 ಕೆಜಿ ಕಳುವಾದ ಅಡಿಕೆ ಮತ್ತು ಕಳವು ಮಾಡಿದ ಸರಕುಗಳನ್ನು ಸಾಗಿಸಲು ಬಳಸಿದ ಕಾರನ್ನು ವಶಪಡಿಸಿಕೊಂಡಿದ್ದಾರೆ. ಪ್ಲಾಂಟೇಶನ್‌ನ ಮಾಲೀಕ ಮಸೂದ್ ಪಟೇಲ್ ಭಟ್ಕಳ ಅವರು ಯಡ್ತರೆ ಗ್ರಾಮದ ಹಡಿನಗದ್ದೆಯಲ್ಲಿ 60 ಎಕರೆ ಭೂಮಿಯಲ್ಲಿ ಕೃಷಿ ಮಾಡಿಕೊಂಡಿದ್ದಾರೆ. ತೋಟದಲ್ಲಿ ಬೆಳೆದ ಸುಮಾರು 200 ಚೀಲ ಒಣಗಿಸಿದ ಸಿಪ್ಪೆ ಸಹಿತ ಅಡಿಕೆಯನ್ನು ಪ್ಲಾಸ್ಟಿಕ್ ಚೀಲಗಳಲ್ಲಿ ಗೋದಾಮಿನಲ್ಲಿ ಸಂಗ್ರಹಿಸಿದ್ದರು. ಮೇ 22 ರ ಬೆಳಗ್ಗೆ, ಗೋದಾಮಿನ ಮುಂಭಾಗದ ಕಬ್ಬಿಣದ ಗ್ರಿಲ್ ಲಾಕ್ ಮುರಿದಿರುವುದನ್ನು ಗಮನಿಸಿದ ಅವರು, ಒಳಗೆ ಹೋಗಿ ನೋಡಿದಾಗ 200 ಚೀಲ ಅಡಿಕೆ ಕಳ್ಳತನವಾಗಿರುವುದು ಕಂಡುಬಂದಿದೆ. ಬೈಂದೂರು ಪರಿಸರದಲ್ಲಿ ಅಡಿಕೆ ಕಳ್ಳತನ ಪ್ರಕರಣಗಳು ವರದಿಯಾದ ಹಿನ್ನಲೆಯಲ್ಲಿ, ಆರೋಪಿಗಳ ಪತ್ತೆಗೆ ಉಡುಪಿ ಜಿಲ್ಲಾ ಎಸ್‌ಪಿ ಹರಿರಾಮ್ ಶಂಕರ್ ಅವರ ಮಾರ್ಗದರ್ಶನದಲ್ಲಿ ವಿಶೇಷ ತನಿಖೆಯನ್ನು ಪ್ರಾರಂಭಿಸಲಾಯಿತು. ಆರೋಪಿಗಳ ಪತ್ತೆಗಾಗಿ ಕುಂದಾಪುರ ಎಎಸ್‌ಪಿ ಸುಧಾಕರ ನಾಯ್ಕ, ಡಿವೈಎಸ್‌ಪಿ ಹೆಚ್ ಡಿ ಕುಲಕರ್ಣಿ ಮತ್ತು ಪೊಲೀಸ್ ವೃತ್ತ ನೀರಿಕ್ಷಕ ಸವೀತ್ರ ತೇಜ್ ಅವರ ನೇತೃತ್ವದಲ್ಲಿ ಎರಡು ವಿಶೇಷ ತಂಡಗಳನ್ನು ರಚಿಸಲಾಯಿತು. ವಿವಿಧ ಠಾಣೆಗಳ ಪಿಎಸ್‌ಐಗಳಾದ ತಿಮ್ಮೇಶ್ ಬಿ.ಎನ್, ನವೀನ ಬೋರಕರ, ವಿನಯ ಅವರು ತಂಡಗಳ ನೇತೃತ್ವ ವಹಿಸಿದ್ದರು. ಸಿಬ್ಬಂದಿಗಳಾದ ನಾಗೇಂದ್ರ, ಸುರೇಶ್, ಚಿದಾನಂದ, ಮಾಳಪ್ಪ ದೇಸಾಯಿ, ಪರಯ್ಯ ಮಠಪತಿ ರವೀಂದ್ರ, ಅಶೋಕ ಮತ್ತು ಚಂದ್ರ ತಂಡದಲ್ಲಿದ್ದರು.



