ಬಿ.ಸಿ.ರೋಡು – ಅಡ್ಡಹೊಳೆವರೆಗೆ ನಡೆಯುತ್ತಿರುವ ರಾಷ್ಟ್ರೀಯ ಹೆದ್ದಾರಿ ಚತುಪ್ಪಥ ಕಾಮಗಾರಿಯ ಸಂದರ್ಭದಲ್ಲಿ ನಡೆಯುವ ಅಪಘಾತಗಳು ಒಂದೆರೆಡಲ್ಲ.ಕಾಮಗಾರಿ ಗುತ್ತಿಗೆ ವಹಿಸಿಕೊಂಡ ಕೆ.ಎನ್.ಆರ್.ಸಿ.ಕಂಪೆನಿಯ ಬೇಜಾವಬ್ದಾರಿ ಕಾಮಗಾರಿಯಿಂದ ಹೆದ್ದಾರಿಯಲ್ಲಿ ಅನೇಕ ಜೀವಗಳು ಬಲಿಯಾಗಿವೆ ಎಂಬ ಆರೋಪಗಳು ಸಾರ್ವಜನಿಕ ವಲಯದಲ್ಲಿ ಕೇಳಿಬಂದಿವೆ.

ರಾಷ್ಟ್ರೀಯ ಹೆದ್ದಾರಿ ಉದ್ದಕ್ಕೂ ಇದು ಕಥೆಯಾದರೆ ! ಕಲ್ಲಡ್ಕದ ಕುದ್ರೆಬೆಟ್ಟುವಿನಲ್ಲಿ ನಡೆಯುವ ಅಪಘಾತಗಳದ್ದು ಬೇರೆಯೇ ಕಥೆ!
ಕಲ್ಲಡ್ಕ ಪೇಟೆಯಿಂದ ಸುಮಾರು ಎರಡು ಕಿ.ಮೀ ದೂರದಲ್ಲಿ ಕುದ್ರೆಬೆಟ್ಟು ಎಂಬ ಸಣ್ಣ ಪೇಟೆಯಿದೆ. ಇತ್ತೀಚಿನ ದಿನಗಳಲ್ಲಿ ಧಾರ್ಮಿಕ ವಾಣಿಜ್ಯವಾಗಿ ಬೆಳೆಯುತ್ತಿರುವ ಪ್ರದೇಶವಾದರೂ ಇಲ್ಲಿ ಚತುಷ್ಪಥ ಹೆದ್ದಾರಿಯಾದ ಬಳಿಕ ಹತ್ತಾರು ಅಪಘಾತಗಳು ನಡೆದಿದೆ. ಅತೀ ಹೆಚ್ಚು ಅಪಘಾತಗಳು ಸಂಭವಿಸಿದ್ದು ಮಾಣಿ ಕಡೆಯಿಂದ ಬರುವ ರಸ್ತೆಯಲ್ಲಿ ಎಂಬುದು ಅಲ್ಲಿನ ಸ್ಥಳೀಯರ ಮಾತಾಗಿದೆ.
ಮಾಣಿಯಿಂದ ಬರುವ ವೇಳೆ ಸಿಗುವ ಕುದ್ರೆಬೆಟ್ಟು ಎಂಬಲ್ಲಿ ಕಾಂಕ್ರೀಟ್ ರಸ್ತೆಯಲ್ಲಿ ಮಳೆ ನೀರು ತುಂಬಿ ವಾಹನಗಳ ಸಂಚಾರಕ್ಕೆ ಅಡ್ಡಿಯಾಗಿ ಅಪಘಾತಗಳು ಸಂಭವಿಸುತ್ತಿವೆ ಎಂದು ಹೇಳುತ್ತಿದ್ದಾರೆ.

ಅಪಘಾತ ಸಂಭವಿಸುವ ರಸ್ತೆಯು ತಗ್ಗುಪ್ರದೇಶವಾಗಿದ್ದು ಮಳೆಗಾಲದಲ್ಲಿ ಅಲ್ಲಿ ನೀರು ತುಂಬಿ ರಸ್ತೆ ಕಾಣುತ್ತಿಲ್ಲ. ಹೆದ್ದಾರಿ ಆಗಿರುವುದರಿಂದ ರಸ್ತೆಯಲ್ಲಿ ಸೀದಾ ಹೋದರೆ ವಾಹನಗಳು ನೀರಿನೊಳಗೆ ಚಲಿಸದೆ ಪಲ್ಟಿಯಾಗುವುದು ಗ್ಯಾರಂಟಿ ಅಥವಾ ಮುಂದಿನ ವಾಹನಕ್ಕೆ ಡಿಕ್ಕಿಯಾಗುತ್ತದೆ.
ಇಂತಹ ಅನೇಕ ಅಪಘಾತಗಳುರಸ್ತೆ ನಿರ್ಮಾಣವಾದ ಬಳಿಕ ನಿರಂತರವಾಗಿ ನಡೆಯುತ್ತಲೇ ಬರುತ್ತಿದ್ದು,ಇಂದು ಮುಂಜಾನೆ ಹಾಗೂ ಸಂಜೆ ಎರಡು ವಾಹನಗಳು ಅಪಘಾತಕ್ಕೊಳಗಾಗಿದೆ.
ಮುಂಜಾನೆ ವೇಳೆ ಬೆಂಗಳೂರು ಕಡೆಯಿಂದ ಮಂಗಳೂರು ಕಡೆಗೆ ಹೋಗುತ್ತಿದ್ದ ಕಾರೊಂದು ರಸ್ತೆಯಲ್ಲಿ ನೀರು ನಿಂತಿರುವುದು ಕಾಣದೆ ಪಲ್ಟಿಯಾಗಿದೆ. ಸಂಜೆ ವೇಳೆ ಸೂರಿಕುಮೇರಿನಿಂದ ಕಲ್ಲಡ್ಕಕ್ಕೆ ಹೋಗುತ್ತಿದ್ದ ವೇಳೆ ಅಂಬ್ಯುಲೆನ್ಸ್ ವಾಹನ ಪಲ್ಟಿಯಾಗಿದೆ.

ಕಲ್ಲಡ್ಕದ ಆಸ್ಪತ್ರೆಯಿಂದ ತುರ್ತಾಗಿ ಮಂಗಳೂರಿಗೆ ರೋಗಿಯನ್ನು ಕರೆದುಕೊಂಡು ಹೋಗಲು ಕರೆ ಬಂದ ಕಾರಣಕ್ಕೆ ಹೋಗುತ್ತಿದ್ದ ವಾಹನ ಪಲ್ಟಿಯಾಗಿದ್ದು, ಯಾವುದೇ ಅಪಾಯ ಸಂಭವಿಸಿಲ್ಲ. ಹೆದ್ದಾರಿ ಇಂಜಿನಿಯರ್ ಗಳ ಅವೈಜ್ಞಾನಿಕ ಕಾಮಗಾರಿಯ ಪರಿಣಾಮ ಇಲ್ಲಿ ನೀರು ನಿಲ್ಲುತ್ತಿದ್ದು, ಅಪಘಾತಗಳಿಗೆ ಕಾರಣವಾಗಿದೆ.
ನೀರು ನಿಲ್ಲುವ ಕಾರಣಕ್ಕೆ ಕೆಲ ದಿನಗಳ ಹಿಂದೆ ಹಳೆಯ ಕಾಂಕ್ರೀಟ್ ಅಗೆದು ಮತ್ತೆ ಸ್ವಲ್ಪ ಎತ್ತರ ಮಾಡಿ ಕಾಂಕ್ರೀಟ್ ಹಾಕಲಾಗಿದೆ.ಆದರೆ ಯಾವುದೇ ಲಾಭವಾಗಿಲ್ಲ. ಮತ್ತೆ ಅದೇ ರಾಗ ಎಂಬಂತೆ ಮತ್ತೆ ಅಪೆ ನಡೆಯತ್ತಿರುವುದು ಇವರ ಬೇಜಾವಬ್ದಾರಿ ಮತ್ತು ಅವೈಜ್ಞಾನಿಕ ಕಾಮಗಾರಿಗೆ ಸಾಕ್ಷಿಯಾಗಿವೆ ಎಂಬ ಅರೋಪ ಕೇಳಿ ಬಂದಿವೆ.
ಮಳೆಗಾಲದಲ್ಲಿ ಇಲ್ಲಿ ಶೇಖರಣೆಯಾಗುವ ಮಳೆ ನೀರು ನಿಲ್ಲದಂತೆ ಸರಾಗವಾಗಿ ಚರಂಡಿ ಸೇರುವಂತೆ ಸೂಕ್ತವಾದ ವ್ಯವಸ್ಥೆ ಕಲ್ಪಿಸವವರೆಗೆ ಅಪಘಾತಗಳು ತಪ್ಪುವುದಿಲ್ಲ ಎಂಬ ಮಾತುಗಳು ಸಾರ್ವಜನಿಕ ವಲಯದಲ್ಲಿ ಕೇಳಿ ಬಂದಿದ್ದು, ಸಮಸ್ಯೆ ಪರಿಹಾರಕ್ಕೆ ಒತ್ತಾಯ ಮಾಡಿದ್ದಾರೆ.



