ದೇರಳಕಟ್ಟೆ:ಕಣಚೂರು ಪದವಿ ಪೂರ್ವ ಕಾಲೇಜಿನ 2025-26ನೇ ಶೈಕ್ಷಣಿಕ ವರ್ಷದ ವಿದ್ಯಾರ್ಥಿ ಸಂಸತ್ತು ಮತ್ತು ವಿದ್ಯಾರ್ಥಿ ಸಂಘಗಳ ಉದ್ಘಾಟನೆ ಹಾಗೂ ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮ ಕಾಲೇಜ್ ಸಭಾಂಗಣದಲ್ಲಿ ನಡೆಯಿತು.

ಶೈಕ್ಷಣಿಕ ವರ್ಷದ ಪದವಿ ಪೂರ್ವ ಪರೀಕ್ಷೆಯಲ್ಲಿ ರಾಜ್ಯಕ್ಕೆ ಎಂಟನೇ ರ್ಯಾಂಕ್ ಪಡೆದ, ಮಿಸಮ್ ಅತಿರಾ ಖಾನ್ ಹಾಗೂ ಉನ್ನತ ಶ್ರೇಣಿ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ಸಮಾಜಿಕ ಕಾರ್ಯಕರ್ತ ವಾಲ್ಟರ್ ಡಿಸೋಜ ನಂದಳಿಕೆ ಮುಖ್ಯ ಅತಿಥಿಗಳಾಗಿ ಮಾತನಾಡಿ ವಿದ್ಯಾರ್ಥಿ ನಾಯಕತ್ವದ ಮಹತ್ವವನ್ನು ಒತ್ತಿ ಹೇಳಿದರು. “ಶಾಲಾ ನಾಯಕರಾದವರು ಕೆಲವೊಂದು ಅವಶ್ಯ ಗುಣಗಳನ್ನು ಅಳವಡಿಸಿಕೊಂಡು ವಿದ್ಯಾರ್ಥಿಗಳಿಗೆ ಮಾದರಿಯಾಗುವುದಲ್ಲದೆ, ಶ್ರದ್ಧೆಯಿಂದ ಕೆಲಸ ಮಾಡಬೇಕು. ಇಂದಿನ ಮಕ್ಕಳು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡುವ ಮೂಲಕ ಸಮುದಾಯದ, ದೇಶದ ಅಭಿವೃದ್ಧಿಗೆ ಶ್ರಮಿಸಬೇಕು ಎಂದು ಅವರು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ
ಕಣಚೂರು ಸಮೂಹ ಸಂಸ್ಥೆಗಳ ಅಧ್ಯಕ್ಷ ಡಾ. ಹಾಜಿ ಯು.ಕೆ.ಮೋನು ಕಾರ್ಯಕ್ರಮ ಅಧ್ಯಕ್ಷತೆ ವಹಿಸಿ ಮಾತನಾಡಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿ ವಿದ್ಯಾರ್ಥಿಗಳಿಗೆ ಶಿಕ್ಷಣದ ಮಹತ್ವವನ್ನು ತಿಳಿಸಿ, ನೂತನ ವಿದ್ಯಾರ್ಥಿ ಸಂಘ ಮತ್ತು ವಿವಿಧ ಸಂಘಗಳ ವಿದ್ಯಾರ್ಥಿ ಪದಾಧಿಕಾರಿಗಳಿಗೆ ಶುಭ ಕೋರಿದರು.
ಮುಖ್ಯ ಅತಿಥಿಗಳು ವಿದ್ಯಾರ್ಥಿ ನಾಯಕರಿಗೆ ಬ್ಯಾಡ್ಜ್‌ಗಳನ್ನು ಪ್ರಧಾನ ಮಾಡಿದರು.
ಕಾಲೇಜಿನ ಪ್ರಾಂಶುಪಾಲರಾದ ಶಾಹಿದಾ ಬಿ.ಎಮ್ ಪ್ರಮಾಣ ವಚನ ಬೋಧಿಸಿದರು. ಹೊಸದಾಗಿ ಆಯ್ಕೆಯಾದ ನಾಯಕರು ಪ್ರಮಾಣ ವಚನ ಸ್ವೀಕರಿಸುವ ಮೂಲಕ ಅರ್ಥಪೂರ್ಣ ಮತ್ತು ಮಹತ್ವದ ವಿದ್ಯಾರ್ಥಿ ಸಂಸತ್ತಿನ ಅಧಿವೇಶನದ ಆರಂಭವನ್ನು ಗುರುತಿಸಿದರು.
2025 -26 ನೇ ಸಾಲಿನ ವಿದ್ಯಾರ್ಥಿ ಸಂಸತ್ತಿನ ಅಧ್ಯಕ್ಷರಾಗಿ ಅಲೀನಾ ಆಯಿಷ , ಉಪ ಅಧ್ಯಕ್ಷರಾಗಿ ಫಾತಿಮ ಅಸ್ನ, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಶಾರೋನ್ ಸಲೋನಿ ಮಾಬೆನ್, ಕ್ರೀಡಾ ಕಾರ್ಯದರ್ಶಿಯಾಗಿ ತನ್ವೀರಾ ಇವರು ಸಾರ್ವತ್ರಿಕ ಚುನಾವಣೆಯ ಮೂಲಕ ಆಯ್ಕೆಯಾದರು.
ಈ ಕಾರ್ಯಕ್ರಮದಲ್ಲಿ ಪ್ರೊ.ಡಾ.ಅಬ್ದುಲ್ ರೆಹಮಾನ್, ಸಂಸ್ಥೆಯ ಸಂಚಾಲಕರಾದ ಮಿ.ಅಬ್ದುಲ್ ರೆಹ್ಮಾನ್, ಟ್ರಸ್ಟಿ ಉಮಯಾ ಬಾನು, ವಿವಿಧ ಸಹ ಶಿಕ್ಷಣ ಸಂಸ್ಥೆಗಳ ಪ್ರಾಂಶುಪಾಲರು, ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಭಾಗವಹಿಸಿದ್ದರು. ಮಿಸ್.ಶಿಭಾನಿ ಕಾರ್ಯಕ್ರಮವನ್ನು ನಿರ್ವಹಿಸಿದರು, ಪ್ರಾಂಶುಪಾಲರಾದ ಶಾಹಿದಾ ಬಿ.ಎಂ. ಅತಿಥಿಗಳನ್ನು ಸ್ವಾಗತಿಸಿದರು, ಪ್ರಮಿತ ವಿದ್ಯಾರ್ಥಿ ಸಂಘದ ಕಾರ್ಯಕ್ರಮ ನಿರೂಪಿಸಿದರು. ಸಾಜಿದಾ ವಂದಿಸಿದರು.



