ಬಂಟ್ವಾಳ; ಸತತವಾಗಿ ಅಪಘಾತಗಳಿಗೆ ಕಾರಣವಾಗಿದೆ ಎನ್ನಲಾದ ಕಲ್ಲಡ್ಕ ಸಮೀಪದ ಕುದ್ರೆಬೆಟ್ಟು ರಾಷ್ಟ್ರೀಯ ಹೆದ್ದಾರಿಯಲ್ಲಿ ನೀರು ನಿಂತಿರುವ ಕಾಂಕ್ರೀಟ್ ರಸ್ತೆಯಲ್ಲಿ ಮತ್ತೆ ಹೆದ್ದಾರಿ ಕಾಮಗಾರಿ ಗುತ್ತಿಗೆ ವಹಿಸಿಕೊಂಡ ಕೆ.ಎನ್.ಆರ್.ಸಿ.ಕಂಪೆನಿಯ ಕೆಲಸಗಾರರಿಂದ ಅಗೆಯುವ ಕೆಲಸ ಆರಂಭವಾಗಿದೆ.
ಕುದ್ರೆಬೆಟ್ಟು ಎಂಬಲ್ಲಿ ಕಂಪನಿಯ ಅವೈಜ್ಞಾನಿಕ ಕಾಮಗಾರಿಯ ಪರಿಣಾಮ ನಿರಂತರವಾಗಿ ಅಪಘಾತಗಳು ನಡೆಯುತ್ತಿವೆ ಎಂಬ ಆರೋಪಗಳ ಹಿನ್ನೆಲೆಯಲ್ಲಿ ಮಾಧ್ಯಮಗಳಲ್ಲಿ ವರದಿಯನ್ನು ಮಾಡಲಾಗಿತ್ತು.ಇದೀಗ ಕಂಪೆನಿಯು ಕಾಂಕ್ರೀಟ್ ರಸ್ತೆಯಲ್ಲಿ ನೀರು ನಿಲ್ಲದಂತೆ ಕ್ರಮವಹಿಸಲು ಮುಂದಾಗಿದ್ದು, ಡಿವೈಡರ್‌ನ್ನು ಅಗೆದು ಗುಂಡಿ ಮಾಡುತ್ತಿದೆ. ಡಿವೈಡರ್‌ನ ಭಾಗದಲ್ಲಿ ತಾತ್ಕಾಲಿಕವಾಗಿ ನೀರು ಹರಿದುಹೋಗಲು ವ್ಯವಸ್ಥೆ ಕಲ್ಪಿಸುವುದಕ್ಕೆ ಗುತ್ತಿಗೆದಾರರು ಮುಂದಾಗಿದ್ದು, ಸದ್ಯದ ಮಟ್ಟಿಗೆ ಉಪಯೋಗವಾಗಬಹುದು ಎಂದು ಹೇಳಲಾಗುತ್ತಿದೆ. ಇಲ್ಲಿನ ಕಾಂಕ್ರೀಟ್ ರಸ್ತೆಯಲ್ಲಿ ನೀರು ನಿಂತ ಪರಿಣಾಮವಾಗಿ ವಾಹನ ಸವಾರರ ನಿಯಂತ್ರಣ ತಪ್ಪಿ ಅಪಘಾತಗಳು ಸಂಭವಿಸಿವೆ. ಎರಡು ದಿನಗಳ ಹಿಂದೆಯಷ್ಟೇ ಅಂಬ್ಯುಲೆನ್ಸ್ ವಾಹನ ಸಹಿತ ಎರಡು ವಾಹನಗಳು ನಿಯಂತ್ರಣ ಕಳೆದು ಪಲ್ಟಿಯಾಗಿದ್ದವು.ಅದೃಷ್ಟವಶಾತ್ ಯಾವುದೇ ಅಪಾಯವಾಗಿರಲಿಲ್ಲ. ಇದೀಗ ಈ ಬಗ್ಗೆ ಗಮನ ಹರಿಸಿದ ಕಂಪೆನಿಯು ಕಾಮಗಾರಿಯನ್ನು ಆರಂಭಿಸಿದೆ.ಇವರ ಯೋಜನೆ ಮತ್ತು ಯೋಚನೆ ಫಲಪ್ರದವಾಗಿ ಪರಿಣಮಿಸಬಹುದಾ ಎಂಬುವುದನ್ನು ಕಾದುನೋಡಬೇಕಾಗಿದೆ.



