ಜನ ಮನದ ನಾಡಿ ಮಿಡಿತ

Advertisement

ಕಂಬನಿ ಜಾರಿದ ಕ್ಷಣ || ಗಂಡು ಮಕ್ಕಳ ಕಂಬನಿ ಜಾರುವ ಆ ಒಂದು ಸಂಧರ್ಭ

ಗಂಡು ಮಕ್ಕಳ ಕಣ್ಣೀರು ಒಂದು ರೀತಿ ಮರುಭೂಮಿಯಲ್ಲಿ ಸುರಿಯುವ ಮಳೆಯ ಹಾಗೆ ತುಂಬಾನೇ ಅಪರೂಪ. ಮನಸ್ಸಿನಲ್ಲಿ ನೂರಾರು ನೋವು, ಯಾತನೆ ಎಲ್ಲವನ್ನೂ ಇಟ್ಟುಕೊಂಡು ಮುಖದಲ್ಲಿ ಮುಗುಳುನಗೆ ಬೀರುವ ಸ್ಪರ್ಧೆಯೇನಾದರೂ ಇದ್ದರೆ ಅದರಲ್ಲಿ ಗಂಡುಮಕ್ಕಳದೇ ಮೇಲುಗೈ ಎಂಬುದರಲ್ಲಿ ಸಂಶಯವಿಲ್ಲ.  ಒಬ್ಬ ಗಂಡಾಗಿ ನನ್ನ ಜೀವನದಲ್ಲಿ ನಾನು ಎಳೆಯವಯಸ್ಸಿನಲ್ಲಿ ಹಠ ಮಾಡಿ ಅತ್ತದ್ದು ಬಿಟ್ಟರೆ, ಬುದ್ಧಿ ತಿಳಿದ ಮೇಲೆ ಅತ್ತದ್ದು ತೀರಾ ಕಡಿಮೆ. ಅದಕ್ಕಾಗಿಯೇ ಮನೆಯವರಿಂದ ಕಲ್ಲುಮನಸ್ಸಿನವನು, ಹಠಮಾರಿ ಹೀಗೆ ನಾನಾ ಬಗೆಯ ನಾಮಧೇಯಗಳು ಬಾಲ್ಯದಿಂದಲೇ ನನ್ನ ಹೆಗಲೇರಿತ್ತು. ತುಂಬಾ ನೋವಾದಾಗ, ದುಃಖವಾದಾಗ ನನ್ನಷ್ಟಕ್ಕೆ ಮೌನವಾಗಿ ಬಿಡುವ ನನ್ನನ್ನು ಅತಿಯಾಗಿ ಅಳಿಸಿದ್ದು ಮಾತ್ರ ಆ ಒಂದು ಕ್ಷಣ..

ಸಾಮಾನ್ಯವಾಗಿ ಗಂಡುಮಕ್ಕಳು ಅಳುವುದು ತನ್ನ ಅಕ್ಕ ಅಥವ ತಂಗಿ ಮದುವೆಯಾಗಿ ತವರುಮನೆಯಿಂದ ಹೊರಡುವ ಸಂಧರ್ಭದಲ್ಲಿ ಎಂದು ಎಲ್ಲರೂ ಹೇಳುತ್ತಿದ್ದರು. ಸ್ವತಃ ಅನುಭವಿಸದೆ ಯಾವ ವಿಚಾರವನ್ನೂ ಸತ್ಯ ಎಂದು ನಂಬದ ನಾನು ಈ ವಿಚಾರದಲ್ಲೂ ಕೂಡ ಅಷ್ಟಾಗಿ ತಲೆಕೆಡಿಸಿಕೊಂಡಿರಲಿಲ್ಲ. ನನಗೆ ಇದ್ದ ಒಬ್ಬಳೇ ಅಕ್ಕ ನನ್ನ ಜೊತೆ ಇದ್ದಷ್ಟು ದಿವಸ ನಮ್ಮ ನಡುವೆ ನಡೆಯುತ್ತಿದ್ದದ್ದು ಬರೀ ಕಿತ್ತಾಟಗಳೇ. ಅವಳು ನನಗೆ ತೋರುತ್ತಿದ್ದ ಪ್ರೀತಿ, ಕಾಳಜಿ ಎಲ್ಲವೂ ಆ ಕಿತ್ತಾಟದ ಹಿಂದೆಯೇ ಮರೆಯಾಗಿತ್ತೋ ಏನೋ, ನನಗೆ ಮಾತ್ರ ಅದು ಕಾಣದ ಕುರುಡಾಗಿ ದೂರವೇ ಉಳಿಯಿತು. ಒಮೊಮ್ಮೆ ಕೋಪದಲ್ಲಿ “ಒಮ್ಮೆ ಮದ್ವೆಯಾಗಿ ಹೋಗಿ ಬಿಡೆ” ಅಂತ ಶಪಿಸಿದ್ದು ಕೂಡ ಉಂಟು. ಕಡೆಗೂ ಆಕೆಯ ಮದುವೆಯ ದಿನ ಬಂದೇ ಬಿಟ್ಟಿತು. ಬಂದ ನೆಂಟರೆಲ್ಲ “ಸಂಜೆ ಅಕ್ಕನನ್ನು ಕಳಿಸಿಕೊಡುವಾಗ ಅಳುವ ಪ್ರೋಗ್ರಾಮ್ ಇಲ್ಲ ಅಲ್ವಾ?” ಅಂತ ನನ್ನನ್ನು ಪ್ರಶ್ನಿಸಿದಾಗ ಕೂಡ ನಾನು ಸಂಜೆ ಅಳುತ್ತೇನೆ ಎಂಬ ಕಲ್ಪನೆಯೂ ನನಗಿರಲಿಲ್ಲ.
ನನ್ನ ಅಕ್ಕನನ್ನು ಬೀಳ್ಕೊಡುವ ಆ ಸಂಜೆ ಬಂದೇ ಬಿಟ್ಟಿತು. ಅಳಬಾರದು ಎಂದು ದೃಢವಾಗಿ ನಿರ್ಧರಿಸಿದರೂ ಏನೋ ಕಳೆದುಕೊಳ್ಳುತ್ತಿರುವ ಭಾವನೆ ನನ್ನಲ್ಲಿ ಮೂಡುತಿತ್ತು. ತವರುಮನೆಯ ಬಂಡಿಯನು ತೊರೆದು ತನ್ನ ಗಂಡನ ಮನೆಯ ಬಂಡಿಯೇರುವ ಮುನ್ನ ಆಕೆ ನನ್ನೊಮ್ಮೆ ಕರೆದು ಬಿಗಿದಪ್ಪಿ ಅತ್ತೇಬಿಟ್ಟಳು. ಎಲ್ಲಿತ್ತೋ ಏನೋ ಈ ಕಲ್ಲುಮನಸು ಕೂಡ ಕರಗಿ ಕಣ್ಣೀರು ಹರಿದೇ ಬಿಟ್ಟಿತು. ಆ ಇಡೀ ರಾತ್ರಿ ನನ್ನ ಬದುಕಿನಲ್ಲಿ ಬರಬೇಕಾದ ಕಂಬಿನಿಯೆಲ್ಲ ಒಮ್ಮೆಲೇ ಬಂತು ಅನ್ನಿಸುತ್ತದೆ, ಅಂದು ನನ್ನನ್ನು ಸಮಾಧಾನಿಸಲು ಯಾರಿಂದಲೂ ಸಾಧ್ಯವಾಗಲೇ ಇಲ್ಲ.

ಆಕೆಯ ಪ್ರೀತಿ, ಕಾಳಜಿ ಎಲ್ಲವೂ ಅರಿವಿಗೆ ಬಂದದ್ದು ಅವಳ ನಿರ್ಗಮನದ ಬಳಿಕವೇ. ಮುಂಜಾನೆ ಕೆಲಸಕ್ಕೆ ಹೋಗುವ ಮುನ್ನ ನನಗೆ ಕಾಲೇಜಿಗೆ ಹೊರಡಲು ಬೇಕಾದ ಸಿದ್ಧತೆ ಮಾಡಿ ಇಡುತ್ತಿದ್ದ ಅವಳ ಅನುಪಸ್ಥಿತಿ ಇತ್ತೀಚಿಗೆ ನನ್ನನ್ನು ಅತಿಯಾಗಿ ಕಾಡುತ್ತದೆ.. ಹೀಗೆ ಬದುಕಿನ ಕೆಲವೊಂದು ಕ್ಷಣಗಳು ನಮಗೆ ಪ್ರೀತಿ, ಸಂಬಂಧದ ಬೆಲೆಯನ್ನು ತಿಳಿಸುತ್ತವೆ. ಯಾವುದೇ ಸಂಬಂಧವಾಗಲಿ ಅವರು ಜೊತೆಯಿದ್ದಾಗಲೇ ಪ್ರೀತಿಸಿ ನಂತರ ಅವರು ಜೊತೆಯಿದ್ದ ನೆನಪುಗಳಷ್ಟೇ ಉಳಿದಿರುತ್ತವೆ. ಜೀವನದಲ್ಲಿ ಇಂತಹ ಕಂಬನಿ ಜಾರಿದ ಕ್ಷಣಗಳು ಎಲ್ಲರಲ್ಲೂ ಇರುತ್ತವೆ, ಖುಷಿ, ದುಃಖ, ಪಶ್ಚಾತಾಪ ಹೀಗೆ ನೂರಾರು ಕಾರಣಗಳಿಗೆ ಜಾರುವ ಪ್ರತಿ ಕಂಬನಿ ನಮ್ಮ ತಪ್ಪುಗಳ ಬಗ್ಗೆ ಅರಿವು ಮೂಡಿಸುವ ಶಿಕ್ಷಕ ಎಂದರೆ ತಪ್ಪಾಗದು..

ಚೇತನ್ ಕಾಶಿಪಟ್ನ

Leave a Reply

Your email address will not be published. Required fields are marked *

ದುಬೈ: ಅಕ್ಟೋಬರ್ 25 ರಂದು ದುಬೈನಲ್ಲಿ ದುಬೈ ಗಡಿನಾಡ ಉತ್ಸವ

ಮಂಗಳೂರು: ಅಶೋಕ ಜನಮನ ಕಾರ್ಯಕ್ರಮ ಆಯೋಜನೆ; ನೂಕು ನುಗ್ಗಲು ಉಂಟಾಗಿ ಅಸ್ವಸ್ಥರಾದ 11ಕ್ಕೂ ಹೆಚ್ಚು ಜನ…!

ಬಂಟ್ವಾಳ: ದ.ಕ.ಜಿಲ್ಲಾ ತುಳು ನಾಟಕ ಕಲಾವಿದರ ಒಕ್ಕೂಟ ವಾರ್ಷಿಕ ಮಹಾಸಭೆ; ನೂತನ ಅಧ್ಯಕ್ಷರಾಗಿ ಕಿಶೋರ್ ಡಿ.ಶೆಟ್ಟಿ ಪುನರಾಯ್ಕೆ….!

ಬಂಟ್ವಾಳ: ಮೊಡಂಕಾಪು ಆಯ್ಯಪ್ಪ ಮಂದಿರದಲ್ಲಿ ನಡೆದ ಸಭೆಯಲ್ಲಿ ಮೂರನೇ ಅವಧಿಯ ಅಧ್ಯಕ್ಷರಾಗಿ ಆಯ್ಕೆಯಾದ ಸುನಿಲ್ ಎನ್

ಬಂಟ್ವಾಳ: ಸುರಿದ ಮಳೆಗೆ ಅವರಣಗೋಡೆ ಕುಸಿದು ಬಿದ್ದು ಹಾನಿ…!

ಪುತ್ತೂರಿನ ಪ್ರಕರಣ, ಕಾರ್ಕಳದ ಅಭಿಷೇಕ್ ಆತ್ಮಹತ್ಯೆಗೆ ಸಂಬಂಧಿಸಿ ಗ್ರಹಸಚಿವರಿಗೆ ಐವನ್ ಡಿಸೋಜಾ ಅವರಿಂದ ಮನವಿ

ಮಂಗಳೂರು: ಪೊಲೀಸ್ ಠಾಣಾ ವ್ಯಾಪ್ತಿಯ ಮೂರು ಕಡೆ ಜಾನುವಾರು ವಧೆ…!

ಉಡುಪಿ: ಅಂಬಲಪಾಡಿಯಲ್ಲಿ ನೇಣಿಗೆ ಶರಣಾದ ಯುವಪ್ರೇಮಿಗಳು….!

ಮಂಗಳೂರು: ಮಾಧವ ಕೊಳತ್ತ ಮಜಲು ಅವರಿಗೆ ಕದ್ರಿ ಬಾಲಕೃಷ್ಣ ಶೆಟ್ಟಿ ಪ್ರಶಸ್ತಿ..!

error: Content is protected !!