ಇತ್ತೀಚಿಗೆ ದಿನ ಪತ್ರಿಕೆಯೊಂದರಲ್ಲಿ ರಾಜ್ಯದ ಹಲವು ಸರಕಾರಿ ವಿದ್ಯಾಸಂಸ್ಥೆಗಳಲ್ಲಿ ಶೂನ್ಯ ದಾಖಲಾತಿ ಆಗಿರುವ ಸುದ್ದಿ ಓದಿ ಒಂದು ಕ್ಷಣ ಆಘಾತವಾಯಿತು. ರಾಜ್ಯದಲ್ಲಿ ನಿರಂತರವಾಗಿ ಸರಕಾರಿ ಶಾಲೆಗಳು ಮುಚ್ಚುತ್ತಿರುವ ಬೆನ್ನಲ್ಲೇ ಇಂತಹ ಸುದ್ದಿಗಳನ್ನು ಓದುವಾಗ ಮತ್ತಷ್ಟು ಸಂಕಟವೆನಿಸುತ್ತದೆ. ಸರಕಾರಿ ಶಾಲೆಗಳು ಕ್ರಮೇಣ ಅವನತಿಯತ್ತ ಸಾಗುವುದಕ್ಕೆ ಕಾರಣವೇನು ಎಂಬುದನ್ನು ಕೆದಕಲು ಹೊರಟಾಗ ಅಲ್ಲಿ ಹಳೆ ಕಾರಣಗಳ ಜೊತೆಗೆ ಕೆಲವು ಮಾಡರ್ನ್ ಕಾರಣಗಳೂ ಕೂಡ ನಮಗೆ ಕಾಣಸಿಗುತ್ತವೆ.

ಸುಮಾರು ಹತ್ತು ವರ್ಷಗಳ ಹಿಂದಕ್ಕೆ ಹೋದರೆ, ಆಗೆಲ್ಲ ಸರಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ಮತ್ತು ಸೌಲಭ್ಯಗಳು ಸಿಗುವುದಿಲ್ಲ ಎಂಬ ಕಾರಣ ಹಿಡಿದು ಪೋಷಕರು ಖಾಸಗಿ ಶಾಲೆಗಳಿಗೆ ತಮ್ಮ ಮಕ್ಕಳನ್ನು ಸೇರಿಸುತ್ತಿದ್ದರು. ಮಕ್ಕಳ ಏಳಿಗೆಯ ದೃಷ್ಟಿಯಲ್ಲಿ ಆಗೆಲ್ಲ ಪೋಷಕರ ಆ ನಡೆ ಸೂಕ್ತವಾಗಿತ್ತು ಅನ್ನಿಸುತ್ತದೆ. ಕಾರಣ ಹತ್ತು ವರ್ಷಗಳ ಹಿಂದೆ ರಾಜ್ಯದ ಸರಕಾರಿ ವಿದ್ಯಾಸಂಸ್ಥೆಗಳ ಗುಣಮಟ್ಟ ತೀರಾ ಕಳಪೆಯಾಗಿತ್ತು. ಶಿಕ್ಷಕರ ಕೊರತೆ, ಸೋರುವ ಕಟ್ಟಡ, ನಾರುವ ಶೌಚಾಲಯ, ಸ್ವಚ್ಛತೆಯ ಕೊರತೆ ಹೀಗೆ ಆಗೆಲ್ಲ ಸರಕಾರಿ ಶಾಲೆಗಳು ಎಂದರೆ ಕೇಳುವ ದಿಕ್ಕಿಲ್ಲದೆ, ಅಭಿವೃದ್ಧಿಯ ಕುರುಹಿಲ್ಲದೆ ನಾಮಕಾವಸ್ಥೆಗೆ ಕಾರ್ಯನಿರ್ವಹಿಸುತಿತ್ತಷ್ಟೇ. ಸರಕಾರಿ ಶಾಲೆಗಳ ಕಳಪೆ ನಿರ್ವಹಣೆಯಿಂದ ಅಲ್ಲಲ್ಲಿ ಖಾಸಗಿ ಶಾಲೆಗಳು ತಲೆಎತ್ತಿದವು, ಅಲ್ಲದೇ ಎರಡು ಮೂರು ವರ್ಷದೊಳಗೆ ಸುಮಾರಷ್ಟು ಸರಕಾರಿ ಶಾಲೆಗಳನ್ನು ನುಂಗಿಹಾಕಿ ರಾಜ್ಯದಲ್ಲಿ ತಮ್ಮ ದರ್ಬಾರು ಪ್ರಾರಂಭಿಸಿದವು. ಈ ಸಂಧರ್ಭದಲ್ಲಿ ಜನರಲ್ಲಿ ಸರಕಾರಿ ಶಾಲೆಗಳು ಎಂದರೆ ಒಂದು ರೀತಿಯ ಅಸಡ್ಡೆಯ ಭಾವ ಹುಟ್ಟಿಕೊಂಡಿತು, ಸರಕಾರಿ ಶಾಲೆಗಳಿಗೆ ತಮ್ಮ ಮಕ್ಕಳನ್ನು ಕಳುಹಿಸುವ ಜನರ ಸಂಖ್ಯೆಯೂ ಕ್ರಮೇಣ ಕಡಿಮೆಯಾಯಿತು.

ಆದರೆ ಹತ್ತು ವರ್ಷಗಳ ಹಿಂದಿನ ಸರಕಾರಿ ಶಾಲೆಯ ಸ್ಥಿತಿಗತಿಗೂ ಈಗಿನ ಸರಕಾರಿ ಶಾಲೆಯ ಸ್ಥಿತಿಗತಿಗೂ ಸಾಕಷ್ಟು ವ್ಯತ್ಯಾಸವಿದೆ. ಅಂದಿನ ರೀತಿಯ ಕಳಪೆ ನಿರ್ವಹಣೆ ಇಂದಿಗೆ ಕಾಣಸಿಗುವುದಿಲ್ಲ ಅಲ್ಲದೇ ಖಾಸಗಿ ಶಾಲೆಗಳಿಗೆ ಸಮಾನಾದ ಸೌಲಭ್ಯಗಳು ಇಂದಿಗೆ ಸರಕಾರಿ ಶಾಲೆಗಳಲ್ಲೂ ದೊರೆಯುತ್ತವೆ. ಆದರೆ ಜನರಲ್ಲಿ ಇನ್ನೂ ಸರಕಾರಿ ಶಾಲೆಗಳ ಬಗೆಗಿನ ಕೆಟ್ಟ ಆಕರ್ಷಣೆ ಮಾತ್ರ ದೂರವಾಗಿಲ್ಲ. ಸರಕಾರಿ ಶಾಲೆಗಳಿಗೆ ಮಕ್ಕಳನ್ನು ಕಳುಹಿಸಿದರೆ ತಮ್ಮ ಪ್ರತಿಷ್ಠೆಗೆ ಧಕ್ಕೆಯಾಗಬಹುದು ಎಂದೇ ಬಹುತೇಕ ಪೋಷಕರು ಮಕ್ಕಳನ್ನು ಲಕ್ಷಾಂತರ ರೂಪಾಯಿ ಶುಲ್ಕ ಕಟ್ಟಿ ಖಾಸಗಿ ಶಾಲೆಗಳಿಗೆ ಸೇರಿಸುತ್ತಿರುವುದು ನಿಜಕ್ಕೂ ವಿಪರ್ಯಾಸ. ಇಂದಿಗೆ ಸರಕಾರಿ ಶಾಲೆಗಳು ಸಾಕಷ್ಟು ಅಭಿವೃದ್ಧಿ ಹೊಂದಿದೆ, ಅಲ್ಲಿ ಶಿಕ್ಷಣದಿಂದ ಹಿಡಿದು ಕಾಲಿಗೆ ಹಾಕುವ ಚಪ್ಪಲಿಯವರೆಗೆ ಎಲ್ಲವೂ ಉಚಿತವಾಗಿಯೇ ಸಿಗುತ್ತದೆ. ಗುಣಮಟ್ಟದ ಆಂಗ್ಲಶಿಕ್ಷಣ, ಡಿಜಿಟಲ್ ತಂತ್ರಜ್ಞಾನಗಳ ಅಳವಡಿಕೆ ಎಲ್ಲವೂ ಇದ್ದರೂ ಕೂಡ ಇಂದಿಗೆ ಸರಕಾರಿ ಶಾಲೆಗಳು ಮಕ್ಕಳ ಕಲರವ ಕೇಳದೆ ಅನಾಥವಾಗಿ ಅವನತಿಯತ್ತ ಸಾಗುತ್ತಿದೆ.

ಇದಕ್ಕೆ ಮೂಲ ಹೊಣೆ ಯಾರು? ಎಂಬ ಪ್ರಶ್ನೆ ಬಂದಾಗ ಬಹುತೇಕರು ಸರಕಾರಿ ಶಾಲೆಗಳ ವಿಚಾರದಲ್ಲಿ ಸರಕಾರ ಸರಿಯಾದ ಅಭಿವೃದ್ಧಿ ಮಾಡದೇ ಇರುವುದು ಎಂಬ ಉತ್ತರವನ್ನೇ ಕೊಡುತ್ತಾರೆ. ಆದರೆ ನನ್ನ ಪ್ರಕಾರ ಸರಕಾರ ಸರಕಾರಿ ಶಾಲೆಗಳ ಅಭಿವೃದ್ಧಿಯಲ್ಲಿ ನಿರಂತರವಾಗಿ ಶ್ರಮಿಸುತ್ತಲೇ ಇದೆ. ಅದಕ್ಕೆ ನಿದರ್ಶನ ಇತ್ತೀಚಿಗೆ ರಾಜ್ಯ ಸರ್ಕಾರ ಕೈಗೊಂಡಿರುವ ಸರಕಾರಿ ಶಾಲೆಗಳನ್ನು ದ್ವಿಭಾಷ ಮಾಧ್ಯಮ ಮಾಡುವ ಯೋಜನೆ. ಇಂದಿಗೆ ಸರಕಾರಿ ಶಾಲೆಗಳು ಅಭಿವೃದ್ಧಿಯಾಗಿದೆ, ಗುಣಮಟ್ಟದ ಶಿಕ್ಷಣ ಕೂಡ ಅಲ್ಲಿ ದೊರೆಯುತ್ತದೆ ಆದರೆ ಜನರಿಗೆ ಸರಕಾರಿ ಶಾಲೆಗಳ ಮೇಲಿನ ಕೆಟ್ಟ ಅಭಿಪ್ರಾಯ ದೂರವಾಗಿಲ್ಲ. ಸರಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ಸಿಗುವುದಿಲ್ಲ ಎಂಬ ಜನರ ಅಂಧ ನಂಬಿಕೆ ದೂರಗೊಳಿಸುವ ಪ್ರಯತ್ನಗಳು ನಡೆಯಬೇಕಿದೆ. ಹಾಗಾದಾಗ ಮಾತ್ರ ಸರಕಾರಿ ಶಾಲೆಗಳನ್ನು ಉಳಿಸಲು ಸಾಧ್ಯ.

ನನ್ನ ಪ್ರಕಾರ ಪ್ರತಿಯೊಂದು ಊರಿನ ಸರಕಾರಿ ಶಾಲೆಗೂ ಒಂದು ಹಳೆ ವಿದ್ಯಾರ್ಥಿ ಸಂಘ ರಚನೆಯಾಗಬೇಕು. ಆ ಸಂಘ ಸರಕಾರಿ ಶಾಲೆಯಲ್ಲಿ ಸಿಗುತ್ತಿರುವ ಗುಣಮಟ್ಟದ ಶಿಕ್ಷಣ ಮತ್ತು ಉಚಿತ ಸೌಲಭ್ಯಗಳ ಬಗ್ಗೆ ಪೋಷಕರಲ್ಲಿ ಅರಿವು ಮೂಡಿಸಿ, ಅವರಲ್ಲಿನ ತಪ್ಪು ಕಲ್ಪನೆ ಹೋಗಲಾಡಿಸಬೇಕು. ತಮ್ಮ ಶಾಲೆಯ ಬಗ್ಗೆ ಪ್ರತ್ಯೇಕ ಪ್ರಮೋಟರ್ಗಳನ್ನಿಟ್ಟು ಪ್ರಮೋಷನ್ ಮಾಡುವ ಖಾಸಗಿ ಸಂಸ್ಥೆಗಳ ರೀತಿ ಸರಕಾರಿ ಶಾಲೆಗಳಲ್ಲಿ ಹಳೆವಿದ್ಯಾರ್ಥಿಗಳು ತಮ್ಮ ಶಾಲೆಯ ಬಗ್ಗೆ ಪ್ರಮೋಟ್ ಮಾಡುವ ಅವಶ್ಯಕತೆಯಿದೆ. ಖಾಸಗಿ ಶಾಲೆಯೊಂದರ ಪರೀಕ್ಷಾ ಫಲಿತಾಂಶ ನೂರು ಶೇಕಡಾ ಬಂದರೆ ಅದು ದಿನ ಪತ್ರಿಕೆಯ ಮುಖಪುಟದಲ್ಲಿರುತ್ತದೆ ಅದೇ ಸರಕಾರಿ ಶಾಲೆಯೊಂದಕ್ಕೆ ನೂರು ಶೇಕಡಾ ಫಲಿತಾಂಶ ಬಂದರೆ ಅದೆಲ್ಲೋ ಮೂಲೆಯಲ್ಲಿ ಸುದ್ದಿಯಾಗಿರುತ್ತದೆ. ಈ ನಿಟ್ಟಿನಲ್ಲಿ ಸರಕಾರಿ ಶಾಲೆಗಳ ಸಾಧನೆಗಳು ಹೆಚ್ಚು ಪ್ರಚಾರವಾಗಬೇಕು, ಆ ಪ್ರಚಾರದ ಹೊಣೆ ಹಳೆವಿದ್ಯಾರ್ಥಿ ಸಂಘ ನಿರ್ವಹಿಸಬೇಕು.

ಹೀಗಾದಾಗ ಸರಕಾರಿ ಶಾಲೆಗಳ ಕಡೆಗೆ ಜನರು ಸಹಜವಾಗಿ ಆಕರ್ಷಿತರಾಗುತ್ತಾರೆ. ಮಕ್ಕಳ ಸದ್ದಿಲ್ಲದೇ ಬಿಕೋ ಎನ್ನುತ್ತಿರುವ ಸರಕಾರಿ ಶಾಲೆಯ ಕಟ್ಟಡದಲ್ಲಿ ಚಿಣ್ಣರ ಚಿಲಿಪಿಲಿ ಕೇಳುತ್ತದೆ.ಸರಕಾರಿ ಶಾಲೆಯೊಂದರ ಕ್ರೀಡಾ ಸಾಧನೆ, ಶೈಕ್ಷಣಿಕ ಸಾಧನೆ ಎಲ್ಲವೂ ಸುದ್ದಿಯಾಗಬೇಕು. ಹಾಗಾದಾಗ ಮಾತ್ರ ಸರಕಾರಿ ಶಾಲೆಯ ಕುರಿತಾಗಿ ಜನರ ದೃಷ್ಟಿಕೋನ ಬದಲಾಗಳು ಸಾಧ್ಯ.
ಚೇತನ್ ಕಾಶಿಪಟ್ನ



