ಕಿನ್ನಿಗೋಳಿ ಮುಲ್ಕಿ ರಾಜ್ಯ ಹೆದ್ದಾರಿಯ ಕೆರೆಕಾಡು ಜಂಕ್ಷನ್ ಬಳಿ ಕಾರುಗಳ ನಡುವೆ ನಡೆದ ಭೀಕರ ಅಪಘಾತದಲ್ಲಿ ಮಗು ಸಹಿತ ಮೂವರಿಗೆ ಗಂಭೀರ ಗಾಯಗಳಾಗಿದ್ದು, ಕಿನ್ನಿಗೋಳಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಗಾಯಗೊಂಡವರನ್ನು ಕುಂದಾಪುರ ತೆಕ್ಕಟ್ಟೆ ನಿವಾಸಿಗಳಾದ 25ವರ್ಷದ ನಿತಿಲ್, 23ವರ್ಷದ ಅವಿನಾಶ್ ಹಾಗೂ 2ವರ್ಷದ ಮೃತ್ವಿನ್ ಎಂದು ಗುರುತಿಸಲಾಗಿದೆ. ಇನ್ನೊಂದು ಕಾರಿನಲ್ಲಿದ್ದ ಮುಲ್ಕಿ ಮೂಲದ ಮೂವರು ಯುವಕರು ಸಣ್ಣ ಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ. ಕಟೀಲು ಕಡೆಯಿಂದ ದೇವರ ದರ್ಶನ ಮುಗಿಸಿಕೊಂಡು ಕುಂದಾಪುರದ ಕಡೆಗೆ ಹೊರಟಿದ್ದ ಕಾರು, ಕಿನ್ನಿಗೋಳಿ ರಾಜ್ಯ ಹೆದ್ದಾರಿಯ ಕೆರೆಕಾಡು ತಲುಪುತ್ತಿದ್ದಂತೆ ಮುಲ್ಕಿ ಕಡೆಯಿಂದ ಅತಿ ವೇಗದಿಂದ ಬಂದ ಕಾರು ಹೆದ್ದಾರಿಯ ಹೊಂಡ ತಪ್ಪಿಸುವ ಬರದಲ್ಲಿ ಎದುರಿನಿಂದ ಬಂದ ಕಾರಿಗೆ ಡಿಕ್ಕಿ ಹೊಡೆದಿದೆ.

ಅಪಘಾತದ ರಭಸಕ್ಕೆ ಎರಡು ಕಾರುಗಳು ಪಲ್ಟಿಯಾಗಿದ್ದು ಕಾರಿನಲ್ಲಿ ಸಿಲುಕಿಕೊಂಡವರನ್ನು ತೆಗೆಯಲು ಸ್ಥಳೀಯರು ಹರಸಾಹಸಪಟ್ಟಿದ್ದಾರೆ. ಅಪಘಾತದಿಂದ ಎರಡು ಕಾರುಗಳು ಜಖಂಗೊಂಡಿದ್ದು, ಅಪಘಾತದಿಂದ ಕೆಲ ಹೊತ್ತು ಹೆದ್ದಾರಿ ಸಂಚಾರ ವ್ಯತ್ಯಯ ಉಂಟಾಗಿತ್ತು. ಸ್ಥಳಕ್ಕೆ ಮಂಗಳೂರು ಉತ್ತರ ಟ್ರಾಫಿಕ್ ಪೊಲೀಸ್ ಭೇಟಿ ನೀಡಿ ಪರಿಶೀಲಿಸಿ ಎರಡು ವಾಹನಗಳನ್ನು ಸ್ಥಳದಿಂದ ಕ್ರೇನ್ ಮೂಲಕ ತೆರವುಗೊಳಿಸಲಾಗಿದೆ.ಅಪಘಾತದ ಭೀಕರ ದೃಶ್ಯ ಸ್ಥಳೀಯ ಅಂಗಡಿಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.



