ಮೂಡಬಿದ್ರೆಯ ಖಾಸಗಿ ಬಸ್ಸಿನಲ್ಲಿ ಪ್ರಯಾಣಿಸುತ್ತಿರುವ ಓರ್ವಳು ಯುವತಿಯೊಂದಿಗೆ ಅಸಭ್ಯವಾಗಿ ವರ್ತಿಸುತ್ತಿರುವ ವ್ಯಕ್ತಿಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಈತನಿಂದ ಯಾರಾದರೂ ತೊಂದರೆಗೊಳಗಾದವರು ಇದ್ದರೆ ನೇರವಾಗಿ ಮೂಡಬಿದ್ರೆ ಪೊಲೀಸ್ ಠಾಣೆಯಲ್ಲಿ ಮಾಹಿತಿ ನೀಡುವಂತೆ ಮೂಡಬಿದಿರೆಯ ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್ ಸಂದೇಶ್ ಪಿ.ಜಿ. ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇತ್ತೀಚೆಗೆ ಖಾಸಗಿ ಬಸ್‌ನಲ್ಲಿ ಪ್ರಾಯದ ವ್ಯಕ್ತಿಯೋರ್ವ ಯುವತಿಯೊಂದಿಗೆ ಅಸಭ್ಯವಾಗಿ ವರ್ತಿಸುತ್ತಿರುವ ವಿಡಿಯೋವೊಂದು ವೈರಲ್ ಆಗಿತ್ತು. ಈ ಬಗ್ಗೆ ಮೂಡಬಿದ್ರೆ ಪೊಲೀಸರು ವಿಚಾರಣೆ ನಡೆಸಿದಾಗ ಆರೋಪಿ ಕಾರ್ಕಳ ಅನೆಕೆರೆಯ ತರಕಾರಿ ಅಂಗಡಿ ಕಾರ್ಮಿಕ, ಬೆಳುವಾಯಿ ಕರಿಯನಂಗಡಿ ಕುಕ್ಕಡೇಲು ನಿವಾಸಿ ರೆಹ್ಮಾನ ಎನ್ನುವುದು ಪತ್ತೆಯಾಗಿದೆ. ವೈರಲ್ ವಿಡಿಯೋದಲ್ಲಿ ಯುವತಿಯ ಮುಖ ಚಹರೆ ಸರಿಯಾಗಿ ಕಂಡು ಬರದ ಕಾರಣ ಆಕೆಯನ್ನು ಗುರುತಿಸಲು ಅಸಾಧ್ಯವಾಗಿರುತ್ತದೆ. ಈ ಬಗ್ಗೆ ಆರೋಪಿ ರಹ್ಮಾನನನ್ನು ಠಾಣೆಗೆ ಕರೆಯಿಸಿ ವಿಚಾರಿಸಿದಾಗ ಆತನಿಗೂ ಸಂತ್ರಸ್ತ ಯುವತಿಯ ಬಗ್ಗೆ ಮಾಹಿತಿ ಇಲ್ಲ ಎನ್ನುವ ಮಾಹಿತಿ ನೀಡಿದ್ದಾನೆ. ಅದುದರಿಂದ ಸಂತ್ರಸ್ತ ಯುವತಿ ಅಥವಾ ಈ ವ್ಯಕ್ತಿಯಿಂದ ತೊಂದರೆಗೊಳಗಾದ ಯಾರಾದರೂ ಇದ್ದರೆ ನೇರವಾಗಿ ಮೂಡಬಿದ್ರೆ ಪೊಲೀಸ್ ಠಾಣೆಗೆ ಬಂದು ದೂರನ್ನು ನೀಡಿದರೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಮೂಡಬಿದ್ರೆ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕರಾದ ನಂದೇಶ್ ಪಿ.ಜಿ. ತಿಳಿಸಿದ್ದಾರೆ. ಆರೋಪಿ ಅಜೆಕಾರ್, ಅನೆಕರೆ ಸುತ್ತಮುತ್ತ ತರಕಾರಿ ಮಾರುತ್ತಿದ್ದು, ಯುವತಿಯರಿಗೆ ಕಿರುಕುಳ ನೀಡುವ ಚಾಳಿ ಇಟ್ಟುಕೊಂಡಿದ್ದ, ಈ ಹಿಂದೆಯೂ ಈತ ಇದೇ ರೀತಿ ವರ್ತಿಸಿದ್ದಾಗಿ ಆರೋಪ ಕೂಡ ಕೇಳಿಬಂದಿದೆ.



