ಬಿಸಿರೋಡಿನಲ್ಲಿ ಟ್ರಾಫಿಕ್ ಪೋಲೀಸ್ ಸಿಬ್ಬಂದಿಗಳು ರಾಷ್ಟ್ರೀಯ ಹೆದ್ದಾರಿಯ ಗುಂಡಿಗಳನ್ನು ಮುಚ್ಚಿದ ಅಪರೂಪದ ಸಂಗತಿಯೊಂದು ಇಂದು ಕಂಡು ಬಂದಿದೆ.

ಮಂಗಳೂರು – ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಬಿಸಿರೋಡಿನ ಸರ್ಕಲ್ ಬಳಿ ರಸ್ತೆಯಲ್ಲಿ ಬೃಹತ್ ಗಾತ್ರದ ಗುಂಡಿಗಳು ಬಿದ್ದಿದ್ದು, ವಾಹನ ಸವಾರರು ಪರದಾಡುವ ದೃಶ್ಯ ನಿತ್ಯ ಕಂಡು ಬರುತಿತ್ತು. ಇನ್ನೊಂದು ಕಡೆ ನಿತ್ಯ ಟ್ರಾಫಿಕ್ ಸಮಸ್ಯೆಗೂ ಕಾರಣವಾಗುತ್ತಿರುವ ಬಗ್ಗೆ ವರದಿಗಳು ಬಂದ ಹಿನ್ನೆಲೆಯಲ್ಲಿ ಬೇಸೆತ್ತ ಇಲ್ಲಿನ ಟ್ರಾಫಿಕ್ ಪೋಲೀಸ್ ಇಲಾಖೆಯ ಸಿಬ್ಬಂದಿಗಳು ಕಲ್ಲುಗಳನ್ನು ತಂದು ಗುಂಡಿ ಮುಚ್ಚುವ ಕಾರ್ಯವನ್ನು ಮಾಡಿದ್ದಾರೆ.

ಹೆದ್ದಾರಿ ಇಲಾಖೆಯವರು ಮಾಡಬೇಕಾದ ಕಾರ್ಯವನ್ನು ಬಂಟ್ವಾಳದಲ್ಲಿ ಟ್ರಾಫಿಕ್ ಕೆಲಸ ಮಾಡಬೇಕಾದ ಟ್ರಾಫಿಕ್ ಪೋಲೀಸ್ ಸಿಬ್ಬಂದಿಗಳು ಮಾಡಬೇಕಾದ ಅನಿವಾರ್ಯತೆ ಒದಗಿ ಬಂದಿದೆ ಎಂಬುದು ಬೇಸರ ತರುವಂತದ್ದು, ಇತ್ತೀಚೆಗೆ ಬಿಸಿರೋಡು ಬಸ್ ನಿಲ್ದಾಣ ಮುಂಭಾಗದಲ್ಲಿ ಆಗಿರುವ ಗುಂಡಿಯ ಬಗ್ಗೆಯೂ ವರದಿ ಬಿತ್ತರವಾದಾಗ ಟ್ರಾಫಿಕ್ ಎಸ್.ಐ.ಸುತೇಶ್ ನೇತ್ರತ್ವದಲ್ಲಿ ಕೆಲವು ಗುಂಡಿಗಳನ್ನು ಮುಚ್ಚುವ ಕಾರ್ಯ ಮಾಡಲಾಗಿತ್ತು. ಇದೀಗ ಮತ್ತೆ ಪೋಲೀಸರು ಗುಂಡಿಯನ್ನು ಮುಚ್ಚುವ ಮೂಲಕ ಹೆದ್ದಾರಿ ಇಲಾಖೆಗೆ ಎಚ್ಚರಿಕೆಯ ಗಂಟೆ ಬಾರಿಸಿದ್ದಾರೆ. ಇನ್ನಾದರೂ ಹೆದ್ದಾರಿ ಇಲಾಖೆಯವರು ಹೆದ್ದಾರಿಯಲ್ಲಿ ಆಗಿರುವ ಗುಂಡಿಗಳನ್ನು ಮುಚ್ಚುವ ಕಾರ್ಯ ಮಾಡಲಿ ಎಂಬುದೇ ನಮ್ಮ ಆಶಯ.



