ಸೌದಿ ಅರೇಬಿಯಾದಲ್ಲಿ ಬಸ್ಸುಗಳ ನಡುವೆ ನಡೆದ ಅಪಘಾತದಲ್ಲಿ ಉಳ್ಳಾಲ ಮಿಲ್ಲತ್ ನಗರದ ಯುವಕನೋರ್ವನು ದಾರುಣ ಮೃತಪಟ್ಟಿರುವ ಘಟನೆ ನಿನ್ನೆ ಸಂಜೆ ನಡೆದಿದೆ.
ಉಳ್ಳಾಲ ಮಿಲ್ಲತ್ ನಗರ ನಿವಾಸಿ ಮೊಹಮ್ಮದ್‌ರವರ ಪುತ್ರ ಅಬ್ದುಲ್ ರಾಝಿಕ್ (27) ಮೃತಪಟ್ಟ ಯುವಕ. ಸೌದಿ ಅರೇಬಿಯಾದಲ್ಲಿದ್ದ ರಾಝಿಕ್ ನಿನ್ನೆ (ಭಾನುವಾರ) ಸಂಜೆ, ಪಾಳಿ ಕೆಲಸಕ್ಕೆಂದು ತೆರಳುತ್ತಿದ್ದಾಗ ರಾಝಿಕ್ ಪ್ರಯಾಣಿಸುತ್ತಿದ್ದ ಬಸ್ ಗೆ ಮತ್ತೊಂದು ಬಸ್ ಢಿಕ್ಕಿ ಹೊಡೆದ ಪರಿಣಾಮ ಗಂಭೀರ ಗಾಯಗೊಂಡ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೊಹಮ್ಮದ್ ಅವರ ಕೊನೆಯ ಪುತ್ರನಾಗಿರುವ ರಾಝಿಕ್ ಸಿವಿಲ್ ಇಂಜಿನಿಯರಿ0ಗ್ ಕೋರ್ಸ್ ಮುಗಿಸಿ ವಿದೇಶಕ್ಕೆ ತೆರಳಿದ್ದರು. ಜುಬೈಲ್‌ನಲ್ಲಿ ಪೋಲಿಟೆಕ್ ಕಂಪೆನಿಯಲ್ಲಿ ಉದ್ಯೋಗ ಗಿಟ್ಟಿಸಿಕೊಂಡಿದ್ದ ಅವರು ಕಳೆದ ಜುಲೈ 11 ರಂದು ಊರಿಗೆ ಬಂದಿದ್ದರು. ಒಂದು ತಿಂಗಳ ರಜೆ ಮುಗಿಸಿ ಆಗಸ್ಟ್ 15 ರಂದು ಎರಡನೇ ಬಾರಿ ಮತ್ತೆ ವಿದೇಶಕ್ಕೆ ತೆರಳಿದ್ದರು. ರಾಝಿಕ್ ಅವರ ಸಹೋದರ, ಹಾಗೂ ಸಹೋದರಿ ಅನಾರೋಗ್ಯದಿಂದ ಈ ಹಿಂದೆ ಮೃತಪಟ್ಟಿದ್ದರು. ಮೃತ ರಾಝಿಕ್ ತಂದೆ ತಾಯಿ, ಮೂವರು ಸಹೋದರಿಯರು, ಓರ್ವ ಸಹೋದರನನ್ನ ಅಗಲಿದ್ದಾರೆ.



